ತುಮಕೂರು: ವ್ಯಕ್ತಿ ಕಾಣೆ ಪ್ರಕರಣವನ್ನು ಬೇಧಿಸುತ್ತಿದ್ದ ಪೊಲೀಸರಿಗೆ ಆ ಗ್ರಾಮದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯಿಂದ ಇಡೀ ಪ್ರಕರಣ ಬಯಲಾಗುವಂತೆ ಮಾಡಿದೆ. ಇದರ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದಾಗ ಕಾಣೆಯಾದ ವ್ಯಕ್ತಿ ಶವವಾಗಿ ಸಿಕ್ಕ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ತೊರೆಮಾವಿನ ಹಳ್ಳಿಯಲ್ಲಿ ನಡೆದಿದೆ.
ಪ್ರಕರಣ ಏನು?: ನಾಲ್ಕು ದಿನಗಳ ಜಗದೀಶ್ ಎಂಬುವರು ತುರುವೇಕೆರೆ ಪೊಲೀಸ್ ಠಾಣೆಗೆ ಬಂದು ತನ್ನ ಸ್ನೇಹಿತ ಯೋಗೀಶ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಈ ನಡುವೆ ನಾಪತ್ತೆಯಾಗಿದ್ದ ಯೋಗೀಶ್ನ ಸ್ನೇಹಿತನೊಬ್ಬ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದು ಪೊಲೀಸರಿಗೆ ಈ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕಾಣೆಯಾದ ವ್ಯಕ್ತಿ ಸಾವನ್ನಪ್ಪಿದ್ದು ಗೊತ್ತಾಗಿದೆ.
ನಾಪತ್ತೆಯಾಗಿದ್ದ ಯೋಗೀಶ್ನ ಸ್ನೇಹಿತನಾದರೋಹಿತ್ ಎಂಬುವವರು ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಆರೋಪಿ ರೋಹಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ವಿನಯ್ ಎಂಬುವವನನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ.
4 ದಿನಗಳ ಹಿಂದೆ ರೋಹಿತ್ ತೋಟದಲ್ಲಿ ಕೊಳವೆಬಾವಿ ರಿಪೇರಿಗೆ ಹೋದಾಗ ವಿದ್ಯುತ್ ತಂತಿ ತಗುಲಿ ಯೋಗೀಶ್ ಮೃತಪಟ್ಟಿದ್ದ. ಇದರಿಂದ ಭಯಗೊಂಡ ರೋಹಿತ್ ಮತ್ತು ವಿನಯ್ ಪ್ರಕರಣವನ್ನು ಮುಚ್ಚಿಹಾಕಲು ಯೋಗೀಶ್ ಶವವನ್ನು 90 ಕಿಲೋಮೀಟರ್ ದೂರ ಬೈಕ್ನಲ್ಲಿ ಕೊಂಡೊಯ್ದು ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಸೇತುವೆಯೊಂದರ ಕೆಳಗೆ ಬಿಸಾಡಿ ಬಂದಿದ್ದರು.
ಬಳಿಕ ಪ್ರಕರಣ ಸುಳಿವು ಸಿಗದಂತೆ ತಿಪಟೂರಿನ ಕೆ ಬಿ ಕ್ರಾಸ್ ಬಳಿ ಯೋಗೀಶ್ ಬೈಕ್ ನಿಲ್ಲಿಸಿ, ಯೋಗೇಶ್ ಕಾಣೆಯಾಗಿರುವಂತೆ ಬಿಂಬಿಸಿದ್ದರು. ಯೋಗೀಶ್ ಕಾಣೆಯಾದ ಬಗ್ಗೆ ಅವನ ಕುಟುಂಬಸ್ಥರು ಕೇಸ್ ದಾಖಲಿಸಿದ್ದರು.
ತನಿಖೆ ನಡೆಸುತ್ತಿದ್ದಾಗ ರೋಹಿತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹವನ್ನು ಪತ್ತೆ ಹಚ್ಚಿರುವ ಪೊಲೀಸರು ಯೋಗೇಶ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬರಬೇಕಾಗಿದೆ. ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳಿಂದ ಸರ್ಕಾರಿ ಭೂಮಿ ಕಬಳಿಕೆ: ಶಾಸಕ ಎ.ಟಿ.ರಾಮಸ್ವಾಮಿ ಗಂಭೀರ ಆರೋಪ