ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಲಭೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಂತಿ - ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಸೌಹಾರ್ದ ಸಭೆ ನಡೆಸಲಾಯಿತು. ಶಾಂತಿ-ಸೌಹಾರ್ದತೆಯ ಸಂಕೇತವಾಗಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ಜೋಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ವೇಳೆ ವಿವಿಧ ಧರ್ಮದ ಧಾರ್ಮಿಕ ಮುಖಂಡರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ವಿವಿಧ ಸಂಘಟನೆಗಳ ಪ್ರಮುಖರು, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ಶಾಂತಿ ಮಂತ್ರ ಜಪಿಸಿದರು.
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕೆಲವರು ಗಲಾಟೆ ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ನಾವೆಲ್ಲರೂ ಸಹೋದರ ಭಾವನೆಯಿಂದ ಇರಬೇಕು. ಭಾರತೀಯ ಸಂಸ್ಕೃತಿಯೇ ವಿಶೇಷವಾದದ್ದು. ನಾವೆಲ್ಲಾ ಆ ದಿಕ್ಕಿನತ್ತ ಕೆಲಸ ಮಾಡೋಣ, ಶಾಂತಿಯನ್ನು ಕಾಪಾಡೋಣ ಎಂದರು.
ಇದನ್ನು ಓದಿ:ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ ಶಿಲ್ಪಾ ಶೆಟ್ಟಿ
ನಂತರ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಮಾತನಾಡಿ, ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದಾಗ ಮತ್ತು ಸಮುದಾಯಗಳು ಸ್ಪಂದಿಸಿದಾಗ ಮಾತ್ರ ಇಂತಹ ಘಟನೆಗಳು ಸಂಭವಿಸಿದಾಗ ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಡೆ ಮಠದ ಮಹಾಂತ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಮೌಲ್ವಿ ಮೌಲಾನಾ ಶಾವುಲ್ ಹಮೀದ್ ಮುಸ್ಲಿಯ ಸೇರಿದಂತೆ ಇತರರು ಉಪಸ್ಥಿತರಿದ್ದರು.