ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಜನರಿಗೆ ಮಾತ್ರ ನೀರು ಸರಬರಾಜು ಮಂಡಳಿಯವರು ಕಲುಷಿತ ನೀರು ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಪಾರ್ಕ್ ಬಡಾವಣೆಯಲ್ಲಿ ನಾಲ್ಕೈದು ದಿನಗಳಿಂದ ಕಲುಷಿತ ನೀರನ್ನು ನೀರು ಸರಬರಾಜು ಮಂಡಳಿ ಪೊರೈಸುತ್ತಿದೆ. ಬಡಾವಣೆಯ ನಾಲ್ಕನೇ ತಿರುವಿನ ಗಿರಿಮಾಜಿ ಮನೆ ರಸ್ತೆಯಲ್ಲಿ ಕಲುಪಿತ, ಕೆಟ್ಟ ವಾಸನೆಯ ನೀರು ಪೊರೈಕೆ ಮಾಡಲಾಗುತ್ತಿದೆ. ಈ ಭಾಗದ ಪ್ರತಿ ಮನೆಯಲ್ಲೂ ಇದೇ ನೀರು ಪೊರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿಯಲು, ಸ್ನಾನ ಮಾಡಲೂ ಬರಲ್ಲ. ಅಲ್ಲದೆ ಮನೆ ಬಳಕೆಗೂ ಬಾರದ ಸ್ಥಿತಿಯಲ್ಲಿ ನೀರು ಕಲುಷಿತವಾಗಿದೆ ಎನ್ನಲಾಗಿದೆ. ಕಳೆದ ಮೂರಾಲ್ಕು ದಿನಗಳಿಂದ ಈ ಭಾಗದ ಜನ ಕುಡಿಯುವ ನೀರಿನ ಕ್ಯಾನ್ ಹಾಕಿಸಿಕೊಂಡು ಬಳಸಿಕೊಳ್ಳುತ್ತಿದ್ದಾರೆ.
ಈ ಕುರಿತು ಮಹಾನಗರ ಪಾಲಿಕೆಯವರಿಗೆ ದೂರು ನೀಡಿದ ತಕ್ಷಣ ಕುಡಿಯುವ ನೀರಿನ ಪೈಪ್ಗೆ ಕಲುಷಿತ ನೀರು ಎಲ್ಲಿಂದ ಬಂದು ಸೇರುತ್ತಿದೆ ಎಂಬುದನ್ನು ಹುಡುಕುವ ಕಾರ್ಯ ನಡೆಸಲಾಗಿದೆ. ಸದ್ಯ ತಾತ್ಕಾಲಿಕವಾಗಿ ಪಾಲಿಕೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ.