ಶಿವಮೊಗ್ಗ: ಮಹಾಮಾರಿ ಕೋವಿಡ್ ಹಾವಳಿಯಿಂದ ಲಾಕ್ಡೌನ್ ಘೋಷಣೆಯಾಗಿತ್ತು. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್ಗಳು ಇಂದಿನಿಂದ ಮತ್ತೆ ರಸ್ತೆಗಿಳಿದಿವೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಖಾಸಗಿ ಬಸ್ ಸಂಚಾರ ಇರುವುದರಿಂದ ಜನರು ಸಹ ಖಾಸಗಿ ಬಸ್ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಸಹ ಖಾಸಗಿ ಬಸ್ ಮಾಲೀಕರ ಸಂಘ ಸಂಚಾರ ಆರಂಭಿಸಿರಲಿಲ್ಲ. ಆದರೆ ಇಂದಿನಿಂದ ನೂರಕ್ಕೂ ಹೆಚ್ಚು ಬಸ್ಗಳ ಸಂಚಾರ ಪ್ರಾರಂಭವಾಗಿದೆ.
ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ರವಿ ಗುರುಪುರ, ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಾಗಲಿ, ರಸ್ತೆ ತೆರಿಗೆ ವಿನಾಯಿತಿಯಾಗಲಿ ಸಿಕ್ಕಿಲ್ಲ. ಆದರೂ ಸಂಕಷ್ಟದ ನಡುವೆಯೇ ಸರ್ಕಾರದ ಮಾರ್ಗಸೂಚಿ ಅನ್ವಯ ಬಸ್ಗಳನ್ನು ರಸ್ತೆಗಿಳಿಸಿದ್ದೇವೆ. ಸದ್ಯಕ್ಕೆ ಡೀಸೆಲ್ ದರ ಹೆಚ್ಚಾಗಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಸ್ ದರ ಏರಿಕೆ ಮಾಡುತ್ತೇವೆ. ಮೊದಲ ದಿನವೇ ಜನರು ಖಾಸಗಿ ಬಸ್ಗಳತ್ತಾ ಮುಖ ಮಾಡುತ್ತಿದ್ದಾರೆ ಎಂದರು.