ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದಿರುವ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ಪ್ರಕರಣದಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಪಟ್ಟಿ ನೀಡುತ್ತಿದ್ದಾರೆ. ಈ ಪಟ್ಟಿಯ ಆಧಾರದ ಮೇಲೆ ಅಮಾಯಕರನ್ನು ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಇದೇ ರೀತಿ ಭದ್ರಾವತಿಯ ಶಾಸಕ ಸಂಗಮೇಶ್ ಕುಟುಂಬ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಮನೆಗಳಿಗೆ ನುಗ್ಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಈ ದೌರ್ಜನ್ಯ ನಿಲ್ಲಿಸದೇ ಹೋದರೆ ಕಾಂಗ್ರೆಸ್ ಕಾರ್ಯಕರ್ತರು ಭದ್ರಾವತಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭದ್ರಾವತಿಯಲ್ಲಿ ಅಪ್ಪಾಜಿ ಗೌಡರ ನಿಧನದ ನಂತರ ಬಿಜೆಪಿಯನ್ನು ಆಡಳಿತಕ್ಕೆ ತರಬಹುದು ಎನ್ನುವ ಕಾರಣಕ್ಕೆ ಇಂತಹ ಗಲಭೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಭದ್ರಾವತಿ ರಾಜಕೀಯ ಇತಿಹಾಸದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಠೇವಣಿಯನ್ನೂ ಸಹ ಬಿಜೆಪಿ ಉಳಿಸಿಕೊಂಡಿಲ್ಲ. ಈಗಲೂ ಸಹ ಭದ್ರಾವತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ತಾಲೂಕು ಪಂಚಾಯತಿ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರಿಲ್ಲ ಎಂದು ಅವರು ಲೇವಡಿ ಮಾಡಿದರು.
ಸದನದಲ್ಲಿ ಶಾಸಕ ಸಂಗಮೇಶ್ ಬಟ್ಟೆ ಕಳಚಿರುವ ಕುರಿತು ಪ್ರತಿಕ್ರಿಯಿಸಿ, ಸದನದ ಒಳಗಡೆ ನಡೆಯುವ ಘಟನೆಗಳಿಗೆ ವಿಮರ್ಶೆ ಮಾಡುವ ಅಗತ್ಯವಿಲ್ಲ. ಸದನದಿಂದ ಅಮಾನತು ಮಾಡಿರುವ ಕುರಿತು ಕಾಂಗ್ರೆಸ್ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ, ನಾವು ಅದಕ್ಕೆ ಬೆಂಬಲ ಸೂಚಿಸುತ್ತೇವೆ ಎಂದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ನೆರವಿಗೆ ನಿಂತ ಪ್ರಣವಾನಂದ ಸ್ವಾಮೀಜಿ