ಶಿವಮೊಗ್ಗ : ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ ಆರೋಪಿಯನ್ನು ಮತ್ತೆ ಬಂಧಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಪ್ರತಾಪ್ ತಪ್ಪಿಸಿಕೊಂಡಿದ್ದ. ಇಂದು ಬೆಳಿಗ್ಗೆ ಹೊಸನಗರ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಆರೋಪಿಯನ್ನು ಪೊಲೀಸರು ಹೊಸನಗರ ಪಟ್ಟಣದಲ್ಲಿ ಹಿಡಿದಿದ್ದಾರೆ.
ಪ್ರಕರಣ ಏನು?: ಮೇ 14ರಂದು ರಾತ್ರಿ ರಿಪ್ಪನ್ಪೇಟೆಯ ಸಾಗರ ರಸ್ತೆಯ ವಡಗೆರೆಯಲ್ಲಿರುವ ಉದ್ಯಮಿ ವೆಂಕಪ್ಪಶೆಟ್ಟಿ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಟ್ರ್ಯಾಕ್ಟರ್ ಕಳ್ಳತನದ ಸಂಶಯದ ಮೇಲೆ ವಡಗೆರೆಯ ನಿವಾಸಿ ಪ್ರತಾಪ್ ಎಂಬಾತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು.
ಟ್ರ್ಯಾಕ್ಟರ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಮೇ 15ರಂದು ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು. ರಾತ್ರಿ ಠಾಣೆಯಲ್ಲಿ ಇರಿಸಿಕೊಳ್ಳಲಾಗಿತ್ತು. ಮರುದಿನ ಬೆಳಗ್ಗೆ ಶೌಚಾಲಯಕ್ಕೆಂದು ಹೊರ ಬರುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಕಾಂಪೌಂಡ್ ಗೋಡೆ ಜಿಗಿದು ಆರೋಪಿ ಪರಾರಿಯಾಗಿದ್ದ.
ಬಳಿಕ ಆರೋಪಿಯ ಬೆನ್ನು ಬಿದ್ದಿದ್ದ ಪೊಲೀಸರು, ಇಂದು ಹೊಸನಗರದ ಮೂಲಕ ಮಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಮೇರೆಗೆ ಹೊಸನಗರ ಪಟ್ಟಣದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ. ಡಿವೈಎಸ್ಪಿ ಶಾಂತವೀರ ಹಾಗೂ ಸಿಪಿಐ ಗಿರೀಶ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ ಕೋಳಿ ಹಾಗೂ ಸಿಬ್ಬಂದಿ ಪ್ರತಾಪ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ: ಬರೋಬ್ಬರಿ 72 ಮರಿಗಳಿಗೆ ಜನ್ಮ ನೀಡಿದ ಎರಡು ಮೊಸಳೆ.. ಅರಣ್ಯ ಸಿಬ್ಬಂದಿಯಿಂದ ತೀವ್ರ ನಿಗಾ