ಶಿವಮೊಗ್ಗ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮೂವರು ಮುಖ್ಯಮಂತ್ರಿಯಾಗುತ್ತಾರೆ. ಮೂವರು ಸಿಎಂ ಆಗುವುದೇ ಬಿಜೆಪಿ ಸರ್ಕಾರದ ಅಜೆಂಡಾವೇನೋ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಟೀಕಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದರು. ಈ ಬಾರಿ ಯಡಿಯೂರಪ್ಪ ಸಿಎಂ ಆಗಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ.
ಮುಂದಿನ ದಿನಗಳಲ್ಲಿ ಮುರುಗೇಶ್ ನಿರಾಣಿ ಸಿಎಂ ಆಗುತ್ತಾರೆ ಅಂತಾ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಹೀಗಾಗಿ, ಅಧಿಕಾರಕ್ಕೆ ಬಂದಾಗಲೆಲ್ಲ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ ಏನೋ ಎಂದರು.
ಇಂತಹ ಭ್ರಷ್ಟ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ :
40 ಪರ್ಸೆಂಟ್ ಕಮಿಷನ್ಗಾಗಿ ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದು. ಈ ಬಜೆಟ್ ಬಳಿಕ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ. ಹೀಗಾಗಿ, ಎಲ್ಲರೂ ಲೂಟಿಗೆ ಇಳಿದಿದ್ದಾರೆ. ಇಂತಹ ಭ್ರಷ್ಟ ಹಾಗೂ ಸತ್ತು ಹೋಗಿರುವ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಇಲ್ಲ ಎನ್ನುತ್ತಿದ್ದಾರೆ. ಆದರೆ, ಮುಂದೆ ಬಿಜೆಪಿ ಇರುತ್ತದೆಯೋ ಎಂಬುದನ್ನು ನೋಡಿಕೊಳ್ಳಲಿ. ಕಾಂಗ್ರೆಸ್ ಸದೃಢವಾಗಿದೆ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ 140 ಸ್ಥಾನದಲ್ಲಿ ಗೆಲ್ಲುತ್ತೇವೆ ಎನ್ನುತ್ತಾರೆ. ಆದರೆ, ಯಡಿಯೂರಪ್ಪ ಅವರನ್ನೇ ಕೆಳಗಿಳಿಸಿದ್ದಾರೆ. ಇನ್ನೆಲ್ಲಿ ಗೆಲ್ಲುವುದು ಎಂದು ಲೇವಡಿ ಮಾಡಿದರು.
ಸರ್ಕಾರ ಇದೆಯೋ, ಸತ್ತಿದೆಯೋ? :
ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲ ಸತ್ತಿದೆಯೋ ಎಂದು ತಿಳಿಯುತ್ತಿಲ್ಲ. ಅತಿವೃಷ್ಟಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ರೈತರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಆದರೆ, ಬಿಜೆಪಿ ಸಚಿವರು ಹಾಗೂ ಶಾಸಕರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರೈತರ ಕಣ್ಣೀರು ಒರೆಸುವವರೇ ಇಲ್ಲವಾಗಿದೆ. ಅಡಿಕೆ, ಭತ್ತ, ಜೋಳ, ರಾಗಿ ಎಲ್ಲವೂ ಮಳೆಯಿಂದ ನಾಶವಾಗಿವೆ. ಆದರೂ, ಶಾಸಕರಾಗಲಿ, ಸಂಸದರಾಗಲಿ, ಅಧಿಕಾರಿಗಳಾಗಲಿ ಚಕಾರ ಎತ್ತುತ್ತಿಲ್ಲ. ರೈತರ ಶಾಪ ಇವರನ್ನು ತಟ್ಟದೇ ಬಿಡದು ಎಂದರು.
ನಾಗೇಶ್ ಡೋಂಗ್ರೆ ವಿರುದ್ಧ ಕಿಡಿ:
ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ನಾಗೇಶ್ ಡೋಂಗ್ರೆ ಬಿಜೆಪಿ ಏಜೆಂಟರಂತೆ, ಸಂಸದರ ಚೇಲಾರಂತೆ ಕೆಲಸ ಮಾಡುತ್ತಿದ್ದಾನೆ. ಸಹಕಾರ ಕ್ಷೇತ್ರದಲ್ಲಿ ನಾಗೇಶ್ ಡೋಂಗ್ರೆ ಎಂಬ ಭ್ರಷ್ಟ ಅಧಿಕಾರಿ ಸೇರಿಕೊಂಡಿದ್ದು, ಈತನನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಈ ಹಿಂದೆ ಈತನ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಮುಂಬಡ್ತಿ ಸಿಕ್ಕಿದ್ದರೂ ಕೂಡ ಅಲ್ಲಿಗೆ ಹೋಗದೇ ಇದೇ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾನೆ ಎಂದು ಆರೋಪಿಸಿದರು. ಅಲ್ಲದೇ ಈ ಅಧಿಕಾರಿಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ಮುಖಂಡರ ಆಶ್ರಯವಿದೆ. ಅವರು ಹೇಳಿದ್ದನ್ನು ಕೇಳುವುದಷ್ಟೇ ಈತನ ಕೆಲಸವಾಗಿದೆ.
ಡೋಂಗ್ರೆ ಇಷ್ಟೆಲ್ಲ ಮಾಡಲು ಪ್ರಮುಖ ಕಾರಣವೆಂದರೆ ವಿಧಾನ ಪರಿಷತ್ ಚುನಾವಣೆ. ಸಹಕಾರ ಕ್ಷೇತ್ರದಲ್ಲಿ ಸುಮಾರು 350ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಅವರನ್ನೆಲ್ಲ ಹೆದರಿಸಿ ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸುವುದು ಮತ್ತು ಬಿಜೆಪಿ ಪರ ಇಲ್ಲದಿದ್ದರೆ ನೋಟಿಸ್ ನೀಡುವುದು ಈತನ ಕೆಲಸವಾಗಿದೆ.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬರಬಾರದು ಎಂಬುದು ಬಹಳ ಮುಖ್ಯವಾದ ಉದ್ದೇಶ. ಆದರೆ, ಸಂಸದರ ಚೇಲನಾಗಿರುವ ಈತ ಮಾತ್ರ ಸಹಕಾರ ಕ್ಷೇತ್ರವನ್ನು ರಾಜಕೀಯಗೊಳಿಸುತ್ತಿದ್ದಾನೆ ಎಂದು ಆರೋಪಿಸಿದರು. ಚುನಾವಣಾಧಿಕಾರಿಗಳು ಈ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು. ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು.
ಚುನಾವಣೆ ಮುಗಿಯವ ತನಕ ಚುನಾವಣಾ ಪ್ರಕ್ರಿಯೆಯಿಂದ ದೂರವಿಡಬೇಕು. ಇಲ್ಲದಿದ್ದರೆ ಈತನ ವಿರುದ್ಧ ಅವರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ತಡೆಯುವ ಪಿಐಎಲ್ ಅರ್ಜಿ ವಜಾ