ಬೆಂಗಳೂರು: ಅಮೃತ ಮಹೋತ್ಸವ ನಡಿಗೆ ಕಾರ್ಯಕ್ರಮ ಸಂಬಂಧ ನಾವು ಕೊಟ್ಟ ಕರೆಗೆ ಆನ್ಲೈನ್ನಲ್ಲಿ ಒಂದು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ನೋಂದಣಿ ಮಾಡಿಕೊಂಡರು. ಇದು ಭಾರತದಲ್ಲಿ ಒಂದು ದೊಡ್ಡ ಚರಿತ್ರೆ ಸೃಷ್ಟಿಸಿದೆ. ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಹೆಜ್ಜೆ ಹಾಕಿದ್ದು, ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ಮೆಟ್ರೋ ನಿಲ್ದಾಣ ಬಳಿ ಹೋದಾಗ, ಸಾವಿರಾರು ವಿದ್ಯಾರ್ಥಿಗಳು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದನ್ನು ನೋಡಿ ನನಗೆ ಬಹಳ ಆನಂದವಾಯಿತು. ಯುವ ಪೀಳಿಗೆ ಈ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ತಂದು ಕೊಟ್ಟಿರುವ ನಮ್ಮ ನಾಯಕರಿಗೆ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಎಲ್ಲ ವಿದ್ಯಾರ್ಥಿಗಳು, ಯುವಕರಿಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ ಎಂದರು.
ಡಿಕೆಶಿ ಕಾರ್ಯಕ್ರಮವಲ್ಲ: ಇದೊಂದು ಐತಿಹಾಸಿಕ ಕಾರ್ಯಕ್ರಮ. ಇದು ಡಿ.ಕೆ ಶಿವಕುಮಾರ್ ಕಾರ್ಯಕ್ರಮವಲ್ಲ. ಸೋನಿಯಾ ಗಾಂಧಿಯವರ ಮುಖಂಡತ್ವದಲ್ಲಿ 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಉದಯಪುರದಲ್ಲಿ ಸೇರಿ ಈ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದೆವು. ಆಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಸೇರಿ ಈ ಕಾರ್ಯಕ್ರಮ ಮಾಡಲು ತೀರ್ಮಾನ ಕೈಗೊಂಡೆವು ಎಂದರು.
ಪಕ್ಷದ ಪರವಾಗಿ ಅಭಿನಂದನೆ: ಈ ದೇಶವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೆಜ್ಜೆ ಹಾಕಬೇಕು ಎಂದು ಭಾರತ ಜೋಡೋ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು. ಇದರ ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಎಲ್ಲ ಜಿಲ್ಲೆಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಬೇಕು ಎಂದು ತಿಳಿಸಿದರು. ನಂತರ ಸ್ವಾತಂತ್ರ್ಯ ದಿನದಂದು ತಿರಂಗಾ ಯಾತ್ರೆ ಮಾಡಬೇಕು ಎಂದು ಸೂಚಿಸಿದರು. ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ಈ ಪಾದಯಾತ್ರೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. 117 ಕ್ಷೇತ್ರಗಳಲ್ಲಿ 60 ರಿಂದ 225 ಕಿ.ಮೀ ವರೆಗೂ ಪಾದಯಾತ್ರೆ ಮಾಡಿದ್ದಾರೆ. ಇವರೆಲ್ಲರಿಗೂ ನಾನು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ, ಇದೇ ಕಾಂಗ್ರೆಸ್ ಪಕ್ಷದ ಇತಿಹಾಸ.
ಜನರ ಭಾವನೆಗೆ ಸ್ಪಂದಿಸಿ: ಆ.30ರವರೆಗೂ ನಿಮಗೆ ಕಾಲಾವಕಾಶವಿದ್ದು, ನಾಯಕರಾಗ ಬಯಸುವವರು ಜನರ ಬಳಿ ಹೋಗಿ ಜನರ ಹೃದಯ ಗೆದ್ದು, ಅವರ ವಿಶ್ವಾಸ ಸಂಪಾದಿಸಬೇಕು. ಗಾಂಧೀಜಿಯವರು ಒಂದು ಮಾತು ಹೇಳಿದ್ದಾರೆ. ನೀನು ನಿನ್ನನ್ನು ನಿಯಂತ್ರಿಸಬೇಕಾದರೆ ನಿನ್ನ ಮೆದುಳನ್ನು ಪ್ರಯೋಗಿಸು. ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯವನ್ನು ಪ್ರಯೋಗಿಸು ಎಂದು. ಅದರಂತೆ ನೀವು ಜನರ ಮಧ್ಯೆ ಹೋಗಿ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವರ ಭಾವನೆಗೆ ಸ್ಪಂದಿಸಿ ಕೆಲಸ ಮಾಡುವ ಅವಕಾಶ ನಿಮಗಿದೆ. ಅದನ್ನು ಬಳಸಿಕೊಳ್ಳಿ ಎಂದು ಡಿಕೆಶಿ ಸಲಹೆ ನೀಡಿದರು.
ದೇಶದಲ್ಲಿ ದೊಡ್ಡ ಚರಿತ್ರೆ ಸೃಷ್ಟಿಸಿದೆ: ನಾವು ಕೊಟ್ಟ ಕರೆಗೆ ಆನ್ಲೈನ್ನಲ್ಲಿ ಒಂದು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ನೋಂದಣಿ ಮಾಡಿಕೊಂಡರು. ಇದು ಭಾರತದಲ್ಲಿ ಒಂದು ದೊಡ್ಡ ಚರಿತ್ರೆ ಸೃಷ್ಟಿಸಿದೆ. ಇಂದು ಲಕ್ಷಾಂತರ ಜನ ಹೆಜ್ಜೆ ಹಾಕಿದ್ದು, ಲೆಕ್ಕ ಹಾಕಲು ಸಾಧ್ಯವಿಲ್ಲ. 30 ಡ್ರೋನ್ಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರ ಹೆಜ್ಜೆಯನ್ನು ಸೆರೆಹಿಡಿದಿವೆ.
ಯಾರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿರಲಿಲ್ಲವೋ ಅವರು ನಿಮ್ಮ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ. ಈ ಸವಿ ನೆನಪಿಗಾಗಿ ನಿಮಗೆ ಪ್ರಮಾಣ ಪತ್ರವನ್ನು ನೀಡಲು ಪ್ರಯತ್ನಿಸುತ್ತೇನೆ. ನೀವಿಂದು ಚರಿತ್ರೆ ಸೃಷ್ಟಿಸಿದ್ದು, ದೇಶಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ, ಶಕ್ತಿ ತುಂಬಿದ್ದೀರಿ. ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ರಾಷ್ಟ್ರಗೀತೆ ತಂದುಕೊಟ್ಟ ನಮ್ಮ ಪೂರ್ವಜರುಗಳಿಗೆ ಗೌರವ ಸಲ್ಲಿಸಿದ್ದೀರಿ. ಇದು ನಿಮ್ಮ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದಾಗಲಿದೆ ಎಂದರು.
ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ. ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದೇ ರೀತಿ ನೀವು ನಿಮ್ಮ ಹುಟ್ಟು ಸಾವಿನ ಮಧ್ಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿರುವುದು ಒಂದು ಸಾಧನೆ ಎಂದರು.
ಹಲವು ಸಮಿತಿ ರಚನೆ: ಈ ಕಾರ್ಯಕ್ರಮ ಯಶಸ್ಸು ಸಾಧಿಸಲು ನಾನು ಹಲವು ಸಮಿತಿ ರಚಿಸಿದ್ದೆ. ಪರಮೇಶ್ವರವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಿತಿ, ರಾಮಲಿಂಗಾ ರೆಡ್ಡಿ ಹಾಗೂ ಡಿ.ಕೆ ಸುರೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆ ಜವಾಬ್ದಾರಿ ನೀಡಲಾಗಿತ್ತು. ಸಾರಿಗೆ ವ್ಯವಸ್ಥೆಗೆ ರೇವಣ್ಣ ಅವರು, ಆಹಾರ ಜವಾಬ್ದಾರಿಯನ್ನು ದಿನೇಶ್ ಗುಂಡೂರಾವ್, ಪ್ರಚಾರದ ಜವಾಬ್ದಾರಿಯನ್ನು ಎಂ.ಬಿ ಪಾಟೀಲ್, ಸಂಸ್ಕೃತಿಕ ಕಾರ್ಯಕ್ರಮ ಜವಾಬ್ದಾರಿಯನ್ನು ಬಿ.ಎಲ್ ಶಂಕರ್ ಅವರ ತಂಡ ವಹಿಸಿಕೊಂಡಿತ್ತು. ಶ್ರೀನಿವಾಸ್ ಹಾಗೂ ನಲಪಾಡ್ ಅವರ ತಂಡ ಮಾಡಿದ ಸಹಕಾರವನ್ನು ನಾನು ಮರೆಯಲು ಸಾಧ್ಯವಿಲ್ಲ. ಇವರೆಲ್ಲರಿಗೂ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ: ಈ ದೇಶ ಕವಲು ದಾರಿಯಲ್ಲಿ ಹೊರಟಿದೆ. ಜನ ಬಹಳ ನೋವಿನಿಂದ ನರಳುತ್ತಿದ್ದಾರೆ. ಕೆಲವರು ದೇಶದ ಚರಿತ್ರೆಯನ್ನು ಬದಲಿಸಲು ಹೊರಟಿದ್ದಾರೆ. ದೇಶದ ಇತಿಹಾಸವನ್ನು ಯಾರು ಬದಲಿಸಲು ಸಾಧ್ಯವಿಲ್ಲ. ನಿನ್ನೆ ಸರ್ಕಾರ ನೀಡಿದ ಜಾಹೀರಾತಿನಲ್ಲಿ ನೆಹರು ಅವರ ಹೆಸರನ್ನೇ ಕೈಬಿಟ್ಟು, ಇತಿಹಾಸದಿಂದ ಅವರ ಹೆಸರು ತೆಗೆದುಹಾಕುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿಗಳಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ನೆಹರು ಅವರ ಹೆಸರು ಸ್ಮರಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವ.. ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಡಿಕೆಶಿ