ಶಿವಮೊಗ್ಗ : ಭದ್ರಾವತಿಯಲ್ಲಿ ಭಾನುವಾರ ನಡೆದ ಅಂತಿಮ ಪ್ರೋ ಕಬ್ಬಡಿ ಪಂದ್ಯಾವಳಿಯ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಭದ್ರಾವತಿಯ ಕನಕ ಮಂಟಪದಲ್ಲಿ ಎರಡು ದಿನಗಳ ಕಾಲ ಪ್ರೋ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಂತಿಮ ಪಂದ್ಯಾವಳಿಯು ಸ್ನೇಹಜೀವಿ ಉಮೇಶ್ ಅವರ ಮಲ್ನಾಡ್ ವಾರಿಯರ್ಸ್ ಹಾಗೂ ಬಿಜೆಪಿಯ ಧರ್ಮಪ್ರಸಾದ್ ಅವರ ಸ್ಟೀಲ್ ಟೀಂ ನಡುವೆ ನಡೆಯಿತು. ಪಂದ್ಯಾವಳಿಯಲ್ಲಿ ಸ್ನೇಹಜೀವಿ ಉಮೇಶ್ ನೇತೃತ್ವದ ಮಲ್ನಾಡ್ ವಾರಿಯರ್ಸ್ ತಂಡ ಜಯಶಾಲಿಯಾಯಿತು.
ಈ ವೇಳೆ ಧರ್ಮಪ್ರಸಾದ್ ತಂಡದ ಓರ್ವ ಯುವಕ ಜೈ ಶ್ರೀರಾಮ್ ಎಂದು ಘೋಷಿಸಿದ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದರು. ಇದೇ ವಿಚಾರಕ್ಕೆ ಎರಡು ಗುಂಪುಗಳ ಮಾರಾಮಾರಿ ನಡೆದಿದೆ. ಪರಿಸ್ಥಿತಿ ತಿಳಿಗೊಳಿಸಲು ಸಾಧ್ಯವಾಗದ ಹಿನ್ನೆಲೆ, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದ್ದಾರೆ.
ಗಾಯಾಳುಗಳು ಆಸ್ಪತ್ರೆಗೆ ದಾಖಲು : ಘರ್ಷಣೆ ವೇಳೆ ಬಿಜೆಪಿಯ ಧರ್ಮಪ್ರಸಾದ್, ಭಜರಂಗದಳದ ನಕುಲ್, ಸುನೀಲ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮರಾಮಾರಿಗೆ ಸಂಬಂಧಿಸಿದಂತೆ ಶಾಸಕ ಸಂಗಮೇಶ್ ಪುತ್ರ ಬಸವರಾಜ್ ಹಾಗೂ ಸಂಗಮೇಶ್ ಸಹೋದರ ಮೋಹನ್ ಅವರ ಇಬ್ಬರು ಪುತ್ರರ ಮೇಲೆ ದೂರು ದಾಖಲಾಗಿದ್ದು, ಶಾಸಕ ಪುತ್ರ ಹಾಗೂ ಸಹೋದರನ ಪುತ್ರರೂ ಸಹ ಪ್ರತಿದೂರು ದಾಖಲಿಸಿದ್ದಾರೆ.
ಆಸ್ಪತ್ರೆಗೆ ಶಾಸಕ ಸಂಗಮೇಶ್ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಶಾಂತರಾಜು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ.