ಶಿವಮೊಗ್ಗ: ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿ 'ಒಮಿಕ್ರಾನ್' ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು ರಾಜ್ಯದಲ್ಲಿ ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಕಾರ್ಯ ಚುರುಕುಗೊಂಡಿದ್ದು ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆಯೂ ಸಹ ಜಿಲ್ಲೆಯಲ್ಲಿ ಹೆಚ್ಚಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ, ಹೆಚ್ಚಿನ ಕೋವಿಡ್ ಟೆಸ್ಟ್ ಮಾಡಲು ಸೂಚಿಸಿದ್ದು, ವ್ಯಾಕ್ಸಿನ್ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದೇಶಿಸಿದೆ. ಹೀಗಾಗಿ, ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಜನ ಮುಂದಾಗುತ್ತಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ವ್ಯಾಕ್ಸಿನ್ ಸೆಂಟರ್ ಕಡೆ ಯಾರೂ ಕೂಡಾ ಮುಖ ಮಾಡಿರಲಿಲ್ಲ. ಆದರೆ, ಕಳೆದ ಏಳು ದಿನಗಳಿಂದ ಲಸಿಕೆ ಪಡೆಯುವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ತರಬೇತಿ ಕೇಂದ್ರದಲ್ಲಿ 2021ರ ಮಾರ್ಚ್‌ನಿಂದ ಲಸಿಕೆ ನೀಡಲಾಗುತ್ತಿದೆ. ಇಲ್ಲಿವರೆಗೆ ಸರಿಸುಮಾರು 7 ರಿಂದ 8 ತಿಂಗಳು ವ್ಯಾಕ್ಸಿನ್ ನೀಡಲಾಗಿದೆ. ಆರಂಭದಲ್ಲಿ ವ್ಯಾಕ್ಸಿನ್ ಅಭಾವದ ಜೊತೆ ಜನಜಂಗುಳಿ ಅಧಿಕವಾಗಿತ್ತು. ಸೆಪ್ಟೆಂಬರ್ ತಿಂಗಳವರೆಗೆ ಉತ್ತಮವಾಗಿ ನಡೆದಿದ್ದ ಲಸಿಕಾ ಅಭಿಯಾನ, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಕಡಿಮೆಯಾಗಿತ್ತು. ಇದೀಗ ಒಮಿಕ್ರಾನ್ ಆತಂಕವಿದ್ದು ಕಳೆದ ಒಂದು ವಾರದಿಂದ ಹೆಚ್ಚು ಜನರು ಲಸಿಕಾ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಶೇ. 90 ರಷ್ಟು ಜನರು ಮೊದಲ ಡೋಸ್ ಹಾಗೂ ಶೇ.75 ರಷ್ಟು ಜನ ಎರಡನೇ ಡೋಸ್ ಪಡೆದಿದ್ದಾರೆ. ಯುವ ಸಮುದಾಯ ಆರೋಗ್ಯವಾಗಿ, ಸದೃಢವಾಗಿ ಇರಬೇಕು. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ. ನಿಮ್ಮ ಕುಟುಂಬಸ್ಥರನ್ನು ಅನಾರೋಗ್ಯಕ್ಕೀಡು ಮಾಡಬಹುದು. ಒಮಿಕ್ರಾನ್ ಹರಡುವ ವೇಗ ಹೆಚ್ಚು, ಆದರೆ ತೀವ್ರತೆ ಬಗ್ಗೆ ಇನ್ನೂ ಪೂರ್ಣ ಮಾಹಿತಿ ಇಲ್ಲ. ದಯವಿಟ್ಟು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಡಾ.ಕಿರಣ್ ಕುಮಾರ್ ಮನವಿ ಮಾಡಿದರು.