ಮೈಸೂರು: ಯುವ ಸಮೂಹದ ನೃತ್ಯವನ್ನು ನೋಡಬೇಕು ಎಂದು ಕಾತುರಗೊಂಡಿದ್ದ ವರುಣ ಕೂಡ ಭಾನುವಾರ ಕುಣಿದು ಕುಪ್ಪಳಿಸಿದ. ಆದರೆ ಯುವಕರ ಕಲಾಸಕ್ತಿಯ ಮುಂದೆ ಮಳೆ ಗೆಲ್ಲಲಿಲ್ಲ.
![Yuvasambhrama in Mysore Manasagangothri](https://etvbharatimages.akamaized.net/etvbharat/prod-images/kn-mys-05-yuvasambrama-vis-ka10003_22092019234908_2209f_1569176348_951.jpg)
ಹೌದು, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ದಸರಾದ ಆರನೇ ದಿನ ಮಳೆಗೂ ಕೂಡ ಯುವಕರೊಂದಿಗೆ ನೃತ್ಯ ಮಾಡುವ ಆಸೆಯಾಯ್ತು. ಒಂದೆಡೆ ಯುವಪಡೆಯನ್ನು ತಂಪು ಮಾಡಿದ ವರುಣ ಅವರ ಸಂತಸವನ್ನು ಕಸಿಯಲು ಯತ್ನಿಸಿದ. ಆದರೆ ಮಳೆಗೆ ಸೆಡ್ಡು ಹೊಡೆದ ಯುವಪಡೆ, ಗಂಗೋತ್ರಿಯಲ್ಲಿ ನೃತ್ಯದ ಝೇಂಕಾರ ಮೊಳಗಿಸಿತು. ಮಳೆಯ ನಡುವೆಯೂ ರೈತ ಗೀತೆ, ಕನ್ನಡ ಡಿಂಡಿಮ, ನಾಡು-ನುಡಿ ಪ್ರೇಮ ಎಲ್ಲರೆದೆಯಲ್ಲಿ ರಿಂಗಣಿಸಿತು.
![Yuvasambhrama in Mysore Manasagangothri](https://etvbharatimages.akamaized.net/etvbharat/prod-images/kn-mys-05-yuvasambrama-vis-ka10003_22092019234908_2209f_1569176348_152.jpg)
![Yuvasambhrama in Mysore Manasagangothri](https://etvbharatimages.akamaized.net/etvbharat/prod-images/kn-mys-05-yuvasambrama-vis-ka10003_22092019234908_2209f_1569176348_890.jpg)
ಕನ್ನಡ ಕುರಿತ ಚಲನಚಿತ್ರ ಗೀತೆಗಳಿಗೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಹೆಚ್.ಡಿ ಕೋಟೆಯ ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜಿನ ಹಳ್ಳಿ ಪ್ರತಿಭೆಗಳು ಜಾನಪದ ನೃತ್ಯ ವೈಭವ ತೋರಿದರು. ಹಬ್ಬಗಳ ಕುರಿತ ಹಾಡುಗಳಿಗೆ ತಿ. ನರಸೀಪುರದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜಾನಪದೀಯ ಪಟ ಕುಣಿತ ಮಾಡಿ ಸಭಿಕರ ಮನ ಗೆದ್ದರು.
ಮಂಡ್ಯದ ಸದ್ವಿದ್ಯಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ಮಂಡ್ಯದ ಗ್ಲೋಬಲ್ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ನಾಡು-ನುಡಿಯ ವೈಭವ ಪಸರಿಸಿದರು.