ಮೈಸೂರು: ತಾಯಿ ಚಾಮುಂಡೇಶ್ವರಿ ರಾಜಮನೆತನದ ಮನೆದೇವರು, ನಾಡಿನ ಅಧಿದೇವತೆ. ಚಾಮುಂಡಿ ಬೆಟ್ಟದ ಅಭಿವೃದ್ಧಿ ಎಲ್ಲವೂ ರಾಜಮನೆತನದಿಂದಲೇ ಆಗಿರುವುದು. ಚಾಮುಂಡೇಶ್ವರಿಗೆ ಧರಿಸುವ ಅಮೂಲ್ಯ ಒಡವೆಗಳು ರಾಜರ ಕೊಡುಗೆ. ರಾಜಮನೆತನದ ಸಂಪ್ರದಾಯ ಮತ್ತು ಚಾಮುಂಡಿ ಬೆಟ್ಟದ ಸಂಪ್ರದಾಯ ಒಂದೇ ಎಂದು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯದುವೀರ್, ಎಲ್ಲರಿಗೂ ಮೈಸೂರು ಅಂದರೆ ಚಾಮುಂಡಿ ಬೆಟ್ಟ ಮನಸ್ಸಿಗೆ ಬರುತ್ತದೆ, ದೊಡ್ಡ ದೇವರಾಜ ಕಾಲದಿಂದಲೂ ಬೆಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ಆಗಿರುವುದನ್ನು ನೋಡಬಹುದು. ಅಲ್ಲಿನ ಒಂದು ಸಾವಿರ ಮಟ್ಟಿಲುಗಳು, ನಂದಿ ವಿಗ್ರಹ ಕೂಡ ದೊಡ್ಡ ದೇವರಾಜರ ಕಾಲದಲ್ಲಿ ಆಗಿರುವುದು ಎಂದರು.
ಬೇರೆ ಬೇರೆ ರಾಜರುಗಳು ಹಾಗೂ ಮೈಸೂರು ಮಹಾರಾಜರು ಕೂಡ ಒಡವೆಗಳನ್ನು ಕೊಟ್ಟಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನದ ಪಕ್ಕ ಮಹಾಬಲೇಶ್ವರ ದೇವಸ್ಥಾನಕ್ಕೆ ಚೋಳ ರಾಜರಿಂದ ಎಲ್ಲಾ ವಿಗ್ರಹಗಳು ಬಂದಿದೆ. ಚಾಮುಂಡೇಶ್ವರಿ ಕೆಲಸಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರೇ ಮಾಡಿದ್ದು. ರಾಜಗೋಪುರ ಸುತ್ತಮುತ್ತ ಕೆಲಸಗಳು ಮಾಡಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರೇ. ಇನ್ನು ಬೆಟ್ಟಕ್ಕೆ ಹಾಗೂ ದೇವಾಲಯಗಳಿಗೂ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಮುಖ್ಯವಾಗಿ ಹಳೇ ಮೈಸೂರು ಕ್ಷೇತ್ರದ ದೇವಸ್ಥಾನದ ಅಭಿವೃದ್ಧಿ ಕೆಲಸ ಮಾಡಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರೇ ಎಂದರು.
ಬೆಟ್ಟದ ಸಂಪ್ರದಾಯ ಮತ್ತು ಅರಮನೆ ಸಂಪ್ರದಾಯ ಎರಡು ಒಂದೇ ಆಗಿದೆ. ಶ್ರೀರಂಗಪಟ್ಟಣದ ಶ್ರೀರಂಗ ಸ್ವಾಮಿ ದೇವಾಲಯ, ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಾಲಯ, ಯೋಗ ನರಸಿಂಹ ಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನಗಳು ಅರಮನೆಗೆ ಸೇರಿದ್ದು. ನಾವು ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವುದಿಲ್ಲ, ನಮಗೆ ಕಂಕಣ ಕಟ್ಟಿರುತ್ತಾರೆ, ನಂತರ ರಥೋತ್ಸವಕ್ಕೆ ಹೋಗುತ್ತೀವಿ ಎಂದು ಯದುವೀರ್ ತಿಳಿಸಿದ್ದಾರೆ.