ಮೈಸೂರು: ಪ್ರವಾಸಿ ನಗರಿ ಮೈಸೂರಿನಿಂದ ತಿರುಪತಿಗೆ ನೇರ ವಿಮಾನಯಾನ ಹಾರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಇಂಡಿಗೋ ವಿಮಾನಯಾನ ಸಂಸ್ಥೆಯ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್ ಮಂಜುನಾಥ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ದೇಶದಲ್ಲೇ ಅತಿಹೆಚ್ಚು ಭಕ್ತಾದಿಗಳು ಭೇಟಿ ನೀಡುವ ತಿರುಪತಿಗೆ ಮೈಸೂರಿನಿಂದ ನೇರ ವಿಮಾನಯಾನ ಹಾರಾಟವನ್ನು ಆರಂಭಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಇದರ ಜೊತೆಗೆ ಟಿಕೆಟ್ ದರ, ಟೂರ್ ಪ್ಯಾಕೇಜ್ ಬಗ್ಗೆ ಚರ್ಚೆ ನಡೆದಿದೆ. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಆನ್ಲೈನ್ ಟಿಕೆಟ್ ವ್ಯವಸ್ಥೆ ಇರುವುದರಿಂದ ಟಿಕೆಟ್ ಬುಕ್ ಆಗಿ ಅಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆಯಾದ ನಂತರ ಭಕ್ತರು ತಿರುಪತಿಗೆ ಹೊರಡುತ್ತಾರೆ.
ಮೈಸೂರಿನಿಂದ ನಿತ್ಯ ಕೆಎಸ್ಆರ್ಟಿಸಿ ಬಸ್, ಕೆಎಸ್ಟಿಡಿಸಿ ಟೂರ್ ಪ್ಯಾಕೇಜ್ ಖಾಸಗಿ ಐಷಾರಾಮಿ ಬಸ್ಗಳ ವ್ಯವಸ್ಥೆ ಹಾಗೂ ನಿತ್ಯವೂ ಮೈಸೂರಿನಿಂದ ನೇರವಾಗಿ ರೈಲು ವ್ಯವಸ್ಥೆ ಇರುವುದರಿಂದ ವಿಮಾನಯಾನಕ್ಕೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಎಂಬ ಸಮೀಕ್ಷೆ ನಡೆಸಿ, ತಿರುಪತಿಗೆ ಮೈಸೂರಿನಿಂದ ಇಂಡಿಗೋ ವಿಮಾನಯಾನ ಸೇವೆಯನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಇಂಡಿಗೋ ವಿಮಾನಯಾನ ಸಂಸ್ಥೆಯ ಜೊತೆ ಮಾತುಕತೆ ನಡೆಸಲಾಗಿದೆ. ತಿರುಪತಿಗೆ ವಿಮಾನಯಾನ ಸೇವೆ ಆರಂಭಿಸಿದ್ರೆ ಆನ್ಲೈನ್ ನಲ್ಲಿ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಂಡವರು ಕಡಿಮೆ ಅವಧಿಯಲ್ಲಿ ದೇವರ ದರ್ಶನ ಮಾಡಿಕೊಂಡು ಬರಲು ಸಾಧ್ಯವಾಗುತ್ತದೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೇಶದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಕೋವಿಡ್ ನಂತರ ವಿಮಾನಯಾನಕ್ಕೆ ಅತಿಹೆಚ್ಚು ಬೇಡಿಕೆ ಬಂದಿದೆ. ಈಗ ಪ್ರತಿದಿನ ಮೈಸೂರಿನಿಂದ ಬೆಂಗಳೂರು, ಹೈದರಾಬಾದ್, ಗೋವಾ, ಕೊಚ್ಚಿ, ಚೆನ್ನೈ, ಹುಬ್ಬಳ್ಳಿಗೆ ವಿಮಾನಯಾನದ ಹಾರಾಟವಿದ್ದು, ಶೇ 75 ರಷ್ಟು ಸೀಟ್ ಗಳು ಭರ್ತಿಯಾಗುತ್ತಿವೆ.
ಮುಂದಿನ ದಿನಗಳಲ್ಲಿ ಕಲಬುರಗಿ, ಪುಣೆ, ತಿರುವನಂತಪುರಂ, ಮಂಗಳೂರು, ಮುಂಬೈ ಹಾಗೂ ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆಯನ್ನು ಪ್ರತಿದಿನ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದರು.
ಮೈಸೂರು ವಿಮಾನದ ರನ್ ವೇ 1,740 ಮೀ ನಿಂದ 2,750 ಮೀ ಗೆ ವಿಸ್ತರಿಸುವ ಪ್ರಸ್ತಾವನೆ ಇದ್ದು, ಇದರ ವಿಸ್ತರಣೆ ಆದರೆ, ಹೆಚ್ಜಿನ ಆಸನಗಳುಳ್ಳ ವಿಮಾನಗಳು ಹಾರಾಟ ನಡೆಸಲು ಸಹಾಯವಾಗುತ್ತದೆ. ಇದರಿಂದ ಮೈಸೂರಿನ ಪ್ರವಾಸೋದ್ಯಮ, ಕೈಗಾರಿಕೆಗಳು, ಶಿಕ್ಷಣ, ಐಟಿ-ಬಿಟಿ ಮತ್ತು ಯೋಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಮಾನ ನಿಲ್ದಾಣದ ಬಳಿ ಇರುವ 48 ಕಟ್ಟಡ ಕೆಡವಲು ಡಿಸಿಗೆ ಸೂಚಿಸಿದ ಹೈಕೋರ್ಟ್