ಮೈಸೂರು: ಮಹಾರಾಷ್ಟ್ರದ ಸಿಎಂ ಆಗಿ ಉದ್ಧವ್ ಠಾಕ್ರೆ ಯಾವ ರೀತಿ ಆಯ್ಕೆಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಬೆಳಗಾವಿ ವಿಚಾರ ಇಟ್ಕೊಂಡು ಆ ಭಾಗದ ಜನರನ್ನು ಓಲೈಕೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಅಸ್ಸೋಂ ಮೃಗಾಲಯದಿಂದ ಬಂದಿರುವ ಅಲಕ್ ಗಿಲ್ಬನ್ ಎಂಬ ಕೋತಿ ಜಾತಿಯ ಪ್ರಾಣಿಗಳನ್ನು ಪ್ರವಾಸಿಗರಿಗೆ ನೋಡಲು ಮುಕ್ತಗೊಳಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಬೆಳಗಾವಿ ವಿಚಾರದಲ್ಲಿ ಮಹಾಜನ್ ವರದಿ ಅಂತಿಮ ಎಂದು ಕೋರ್ಟ್ ಹೇಳಿದೆ. ಹಿಂದೆ, ಇಂದು, ನಾಳೆ ಮತ್ತು ಮುಂದೆ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದಾಗಿದೆ.
ಬೆಳಗಾವಿ ವಿಚಾರವನ್ನು ಅಲ್ಲಿನ ಸಿಎಂ ಠಾಕ್ರೆ ಜನರನ್ನು ಓಲೈಕೆ ಮಾಡಲು ಬಳಸುತ್ತಿದ್ದಾರೆ ಎಂದರು. ಬೇಸಿಗೆ ಕಾಲದಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಹತ್ತಿಕೊಳ್ಳದಂತೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಮುಂದೆಯೂ ಸಹ ಅಧಿಕಾರಿಗಳ ಸಭೆ ಕರೆದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆಗಳಿಗೆ ಸರಿಯಾಗಿ ಪರಿಹಾರ ವಿತರಿಸಲಾಗುತ್ತಿಲ್ಲ ಎಂಬುದು ಸುಳ್ಳು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾನದಂಡಗಳ ಅನುಸಾರವಾಗಿಯೇ ಪರಿಹಾರ ನೀಡಲಾಗುತ್ತಿದೆ ಎಂದರು.