ಮೈಸೂರು: ಈ ಬಾರಿ ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ಆರಂಭವಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಗಜಪಯಣ ನಡೆಯಲಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆಯಾಗಿದ್ದ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಪ್ರವಾಸೋದ್ಯಮದ ಉತ್ತೇಜನಕ್ಕೆ ಅದ್ದೂರಿ ದಸರಾ ನಡೆಸಲು ಉತ್ಸುಕರಾಗಿದ್ದಾರೆ.
ಜುಲೈ 15ರಿಂದ ಆನೆಗಳ ಆಯ್ಕೆ: ದಸರಾಗೆ 60 ದಿನ ಮುಂಚೆಯೇ ಗಜ ಪಯಣದ ಮೂಲಕ 15 ಆನೆಗಳನ್ನು ಕರೆತರಲು ಸಿದ್ಧತೆ ನಡೆಯುತ್ತಿದೆ. ಗಜಪಯಣದ ಮೂಲಕ ಅರಮನೆಗೆ ಆಗಮಿಸುವ ಆನೆಗಳಿಗೆ ಆಹಾರ ಪೂರೈಸುವ ಟೆಂಡರ್ ಅನ್ನು ಇಂದು(ಜುಲೈ 01) ಕರೆಯಲಿದ್ದು, ಜುಲೈ 15 ರಿಂದ ವೈದ್ಯರು, ಅರಣ್ಯಾಧಿಕಾರಿಗಳು ಹಾಗೂ ತಜ್ಞರ ತಂಡ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ಭೇಟಿ ನೀಡಿ 15 ಆನೆಗಳನ್ನು ಆಯ್ಕೆ ಮಾಡಲಿದೆ.
ಅಭಿಮನ್ಯು ನೇತೃತ್ವದ ಗೋಪಾಲ ಸ್ವಾಮಿ, ಧನಂಜಯ, ಅಶ್ವತ್ಥಾಮ, ವಿಕ್ರಮ, ಗಜೇಂದ್ರ, ಅರ್ಜುನ ಸೇರಿದಂತೆ 15 ಆನೆಗಳನ್ನು ಆಗಸ್ಟ್ ಮೊದಲ ವಾರದಲ್ಲಿ ಅಂದರೆ 60 ದಿನ ಮೊದಲೇ ಅರಮನೆಗೆ ತರಲಾಗುವುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಡಿ.ಸಿ.ಎಫ್ ವಿ.ಕರಿಕಾಲನ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 26ಕ್ಕೆ ನವರಾತ್ರಿ ಆರಂಭ: ದಸರಾ ಮಹೋತ್ಸವಕ್ಕೆ 86 ದಿನ ಬಾಕಿಯಿದೆ. ಸೆಪ್ಟೆಂಬರ್ 26ಕ್ಕೆ ನವರಾತ್ರಿ ಆರಂಭವಾಗಲಿದ್ದು, ಅ. 5 ರಂದು ಜಂಬೂಸವಾರಿ ನಡೆಯಲಿದೆ.
ಇದನ್ನೂ ಓದಿ : ಮೊದಲ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ