ಮೈಸೂರು: ಸ್ವಚ್ಛ ನಗರಿ ಪಟ್ಟ ಹೊಂದಿರುವ ಮೈಸೂರು ನಗರದ ಪ್ರಮುಖ ಜನನಿಬಿಡ ರಸ್ತೆಯಲ್ಲಿ ನಿರ್ಮಾಣವಾಗಿರುವ ಇ-ಟಾಯ್ಲೆಟ್ಗಳು ಸರಿಯಾದ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿವೆ.
ನಗರದಲ್ಲಿ ಹೈಟೆಕ್ ರೀತಿಯಲ್ಲಿ 1.16 ಕೋಟಿ ರೂ. ವೆಚ್ಚದಲ್ಲಿ 23 ಇ-ಟಾಯ್ಲೆಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಾರಂಭದಲ್ಲಿ ಒಂದು ವರ್ಷ ಕಾಲ ಗುತ್ತಿಗೆದಾರರು ಇವನ್ನು ನಿರ್ವಹಣೆ ಮಾಡಿದ್ದರು. ಗುತ್ತಿಗೆ ಮುಗಿದ ನಂತರ ನಿರ್ವಹಣೆ ಕೆಲಸವನ್ನು ಬಿಟ್ಟಿದ್ದಾರೆ. ಆದರೆ ಪಾಲಿಕೆಯವರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಇ-ಶೌಚಾಲಯವನ್ನು ನಿರ್ವಹಣೆ ಮಾಡುವವರು ಇಲ್ಲದೇ, ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಬಾಗಿಲನ್ನು ಬಂದ್ ಮಾಡಲಾಗಿದೆ.
ನಗರದಲ್ಲಿರುವ ಎಲ್ಲ 23 ಇ-ಟಾಯ್ಲೆಟ್ಗಳು ಬಂದ್ ಆಗಿವೆ. ಈ ಸಂಬಂಧ ಮೈಸೂರು ನಿವಾಸಿ ಟಿ. ಕೃಷ್ಣರೆಡ್ಡಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದು, ಇದರಿಂದ ಈ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೋವಿಡ್ ಹಿಂದಿನಷ್ಟು ಗಂಭೀರವಾಗಿಲ್ಲ, ಶಾಲೆಗಳನ್ನು ಮುಚ್ಚಬೇಡಿ : ಸಭಾಪತಿ ಬಸವರಾಜ ಹೊರಟ್ಟಿ
ಪಾಲಿಕೆಯವರು ಇ-ಟಾಯ್ಲೆಟ್ಗಳ ನಿರ್ವಹಣೆಗಾಗಿ ಟೆಂಡರ್ ಕರೆದಿದ್ದು, ಶೀಘ್ರದಲ್ಲೇ ಇವುಗಳನ್ನು ದುರಸ್ತಿ ಮಾಡಿಸಿ, ಸಾರ್ವಜನಿಕ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು ಎಂದು ಪಾಲಿಕೆಯ ಒಳಚರಂಡಿ ವಿಭಾಗದ ಅಧಿಕಾರಿ ಸಿಂಧು ಅವರು ತಿಳಿಸಿದ್ದಾರೆ.
ಜೊತೆಗೆ ಪಾಲಿಕೆಯ ಸಿಬ್ಬಂದಿಗೂ ಇದರ ನಿರ್ವಹಣೆಯ ಬಗ್ಗೆ ತರಬೇತಿ ನೀಡುವ ಯೋಜನೆ ಇದ್ದು, ಮುಂದಿನ ದಿನಗಳಲ್ಲಿ ಖಾಸಗಿಯವರಿಗೆ ಟೆಂಡರ್ ನೀಡದೇ ಪಾಲಿಕೆಯವರೇ ನಿರ್ವಹಣೆ ಮಾಡುವ ಚಿಂತನೆ ಇದೆ ಎಂದು ಮಾಹಿತಿ ನೀಡಿದ್ದಾರೆ.