ಮೈಸೂರು: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಗೊತ್ತಿಲ್ಲ. ಮುಂದಿನ 3 ವರ್ಷ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಶಾಸಕ ಮುರುಗೇಶ್ ನಿರಾಣಿ ಹೇಳಿದರು.
ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಆಗಮಿಸುವಂತೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿಯಲ್ಲೇ ಇರುತ್ತೇನೆ. ಮಂತ್ರಿ ಮಾಡಿದರೆ ಮಂತ್ರಿಯಾಗುತ್ತೇನೆ. ಮಾಡದಿದ್ದರೂ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ನಿರಾಣಿ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಸಕ್ಕರೆ ಕಾರ್ಖಾನೆ ಬಗ್ಗೆ ಕೇಳಿ ಉತ್ತರ ಹೇಳುತ್ತೇನೆ. ಲಕ್ಷ್ಮಣ ಸವದಿ ದೆಹಲಿಗೆ ಭೇಟಿ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಪತ್ರಿಕೆ ಮತ್ತು ಟಿವಿ ನೋಡಿಲ್ಲ. ಆದರೂ ಯಡಿಯೂರಪ್ಪ ಅವರೇ 3 ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದರು.
ಆಗಸ್ಟ್ 11ರಂದು ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭ ಮಾಡುತ್ತೇವೆ. ಹಿಂದೆ ಇದ್ದ ಕಾರ್ಮಿಕರನ್ನು ಎಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳುತ್ತೇನೆ. ರೈತರಿಗೆ ಇದರಿಂದ ಅನುಕೂಲ ಆಗಲಿದೆ. ಸಕ್ಕರೆ ಕಾರ್ಖಾನೆ ಮತ್ತು ಸಿಮೆಂಟ್ ಕಾರ್ಖಾನೆಯ ಉದ್ಯಮದ ಅನುಭವ ನನಗಿದೆ ಎಂದರು.