ಮೈಸೂರು: ವಾರಾಣಸಿಯ ಕೇಂದ್ರ ಭಾಗದಲ್ಲಿ ನಿರ್ಮಾಣ ಮಾಡಿರುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಿದ್ದಾರೆ. ಆದರೆ, ದೇವಾಲಯ ಜೀರ್ಣೋದ್ಧಾರ ಮಾಡಿದ ಮಹಾರಾಣಿ ಅಹಲ್ಯಾ ಬಾಯಿಹೋಳ್ಕರ್ ಅವರ ಹೆಸರು ಎಲ್ಲಿಯೂ ಕಾಣದಿರುವುದು ಬೇಸರದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕ್ರೈಸ್ತರಿಗೆ ರೋಮ್ , ಮುಸ್ಲಿಂರಿಗೆ ಮೆಕ್ಕಾ, ಮದೀನಾ ಧಾರ್ಮಿಕ ಕ್ಷೇತ್ರಗಳಾಗಿದ್ದು, ಅಂತೆಯೇ ಹಿಂದೂಗಳಿಗೆ ಕಾಶಿ ಧಾರ್ಮಿಕ ಕ್ಷೇತ್ರವಾಗಿದೆ. ಇಂತಹ ಧಾರ್ಮಿಕ ಕ್ಷೇತ್ರ ಕಾಶಿ ವಿಶ್ವನಾಥ ದೇವಾಲಯವನ್ನು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಪುನರ್ ನಿರ್ಮಾಣ ಮಾಡಿದ್ದು, ಹಿಂದೂಗಳಿಗೆ ಅಸ್ಮಿತೆ ಹಾಗೂ ಐಕ್ಯತಾ ಕ್ಷೇತ್ರವಾಗಿದೆ.
ಆದರೆ, ಇಂದಿನ ಕಾರ್ಯಕ್ರಮದಲ್ಲಿ ಎಲ್ಲಿಯೂ ಅವರ ಹೆಸರು ಕಾಣದಿರುವುದು ವೇದನೆಯ ಸಂಗತಿ. ಹಿಂದೂ ಸ್ತ್ರೀಯನ್ನು ಮರೆಯಬಾರದು. ವಾರಾಣಸಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಕನಕ ಗುರುಪೀಠದ ಸ್ವಾಮೀಜಿಗೆ ಆಹ್ವಾನ ನೀಡದಿರುವುದಕ್ಕೆ ಆಕ್ರೋಶ:
ಅಂತೆಯೇ ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಸ್ವಾಮೀಜಿಗಳನ್ನು ಆಹ್ವಾನಿಸಿದ್ದು, ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿಯನ್ನು ಆಹ್ವಾನಿಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಗಿನೆಲೆ ಗುರು ಪೀಠವನ್ನು ಮರೆತರಾ?. ಇದೊಂದು ದೊಡ್ಡ ಮಠವಾಗಿದ್ದು, ನಾಲ್ಕು ಕಡೆ ತಮ್ಮ ಶಾಖೆಗಳನ್ನು ಹೊಂದಿದೆ. ಇಂತಹ ಮಠದ ಪೀಠಾಧಿಪತಿಗಳನ್ನು ಯಾಕೆ ಕರೆದಿಲ್ಲ. ನಾವು ಬೇಡವೇ ನಿಮಗೆ ಎಂದು ಪ್ರಶ್ನಿಸಿದರು.
ಅಹಲ್ಯಾಬಾಯಿ ಹೋಳ್ಕರ್ ಅವರನ್ನು ನೆನಪಿಸಿಕೊಳ್ಳದ ಪ್ರಧಾನಿ ಮೋದಿ ಅವರು ಹಾಗೂ ಪೀಠಾಧಿಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.
ಕರ್ನಾಟಕದಲ್ಲಿ ಪ್ರತಿಪಕ್ಷ ಇದೆಯೇ?:
ಈ ಘಟನೆ ಪ್ರತಿ ಪಕ್ಷಗಳಿಗೆ ಆಹಾರವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಪ್ರತಿಪಕ್ಷ ಇದೆಯೇ?. ಪ್ರತಿಪಕ್ಷ ಯಾವುದು ಎಂದು ಗೊತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಕೊಡುಗೆ ಏನು?:
ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು?, ಹೊಟ್ಟೆ ಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ಇವರು ಏನು ಕೊಡುಗೆ ನೀಡಿದ್ದಾರೆ ಹೇಳಲಿ. ಬಿಜೆಪಿಗೆ ಸೇರಬೇಡಿ ಎಂದು ಹೇಳಲು ಸಿದ್ದರಾಮಯ್ಯ ಯಾರು?. ಕುರುಬರ ಮನೆ ಹಾಳು ಮಾಡಿದ್ದೀರಿ. ಕುರುಬರಿಗಾಗಿ ಏನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಅಹಂಕಾರದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು:
ಮರಿಗೌಡ ಅವರು ಎಂಎಲ್ಸಿ ಟಿಕೆಟ್ ಕೇಳಲು ಹೋದಾಗ ಸೋಲಿಸಿ, ಟಿಕೆಟ್ ಕೇಳಲು ಬಂದಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದು, ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು, ಮರಿಗೌಡ ಅಥವಾ ಜಿ.ಟಿ.ದೇವೇಗೌಡ ಅಲ್ಲ. ಬದಲಿಗೆ ನಿಮ್ಮ ಅಹಂಕಾರ ನಿಮ್ಮನ್ನು ಸೋಲಿಸಿತು. ಇದನ್ನು ಅರ್ಥಮಾಡಿಕೊಂಡು ನಡೆಯಬೇಕು ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಮೋದಿ, ಅಡ್ವಾಣಿ, ವಾಜಪೇಯಿ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟಕ್ಕೆ ಹೋಗಿದ್ರಾ? ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ. ಕನ್ನಡ ಚಳವಳಿ ಅವರನ್ನು ಕರೆಯಿಸಿ, ಹೋರಾಟಲ್ಲಿ ಭಾಗಿಯಾಗಿದ್ದಾರಾ? ಎಂದು ಕೇಳಿ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್