ಮೈಸೂರು: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಅಂಬಾವಿಲಾಸ ಅರಮನೆಯ ಯೋಗ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಅರಮನೆಯ ಮುಂಭಾಗ ನಡೆಯಲಿರುವ ಯೋಗ ದಿನದ ವೇದಿಕೆಯಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಭಾಗವಹಿಸಲಿದ್ದು, ಸುಮಾರು 51 ವಿವಿಧ ವರ್ಗದ ಜನರೂ ಪಾಲ್ಗೊಳ್ಳಲಿದ್ದಾರೆ.
10 ಸಾವಿರಕ್ಕೂ ಹೆಚ್ಚು ಮಂದಿಗೆ ಅವಕಾಶ: "ಈಗಾಗಲೇ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿರುವ ಜನರು ಪ್ರಧಾನಿಯೊಂದಿಗೆ ಯೋಗ ಮಾಡುವರು. ಈ ನಿಟ್ಟಿನಲ್ಲಿ ಅರಮನೆ ಮುಂಭಾಗ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅರಮನೆಯ ನಾಲ್ಕು ದ್ವಾರಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆ 5:30 ರ ಒಳಗೆ ಅರಮನೆಯೊಳಗೆ ಯೋಗ ಮಾಡುವವರು ಬರಬೇಕು, ಅನಂತರ ನಾಲ್ಕು ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು. 10,000ಕ್ಕೂ ಹೆಚ್ಚು ಮಂದಿ ಯೋಗ ಮಾಡಲು ವೇದಿಕೆ ಮಾಡಲಾಗಿದೆ" ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.
ಪ್ರಧಾನಿ ಸ್ವಾಗತಕ್ಕೆ ಯೋಗ ನಗರದ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಮೋದಿಯವರು ಹಾದು ಹೋಗುವ ರಸ್ತೆಗಳ ಪಕ್ಕದಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರವೂ ಆಗಿದೆ.
ಕಾರ್ಯಕ್ರಮಗಳು: ಇಂದು ಸಂಜೆ ಪ್ರಧಾನಿ ಮೋದಿ ಮಹಾರಾಜ ಕಾಲೇಜು ಮೈದಾನದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ಚಾಮುಂಡಿ ಬೆಟ್ಟಕ್ಕೆ ರಾತ್ರಿ 8 ಗಂಟೆಗೆ ಆಗಮಿಸಿ ನಾಡದೇವತೆಯ ದರ್ಶನ ಪಡೆಯಲಿದ್ದಾರೆ. ಬಳಿಕ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಬೆಳಗ್ಗೆ ಅರಮನೆ ಆವರಣದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಂತರ ವಸ್ತು ಪ್ರದರ್ಶನ ವೀಕ್ಷಿಸುವರು. ಬಳಿಕ, ಅರಮನೆಗೆ ಭೇಟಿ ನೀಡಿ ರಾಜವಂಶಸ್ಥರ ಜೊತೆ ಬೆಳಗಿನ ಉಪಹಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧ: ಮೋದಿ