ಮೈಸೂರು: ನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಿ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಕಾನೂನಿಗೆ ತಲೆಬಾಗಲೇಬೇಕು.ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಮಾಡಿದ ಅವರು,ನನ್ನ ಹೆಸರಲ್ಲಿ ಯಾವುದೇ ಆಸ್ತಿ ಇರಲಿಲ್ಲ.ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಪತಿಯ ಆಸ್ತಿಯನ್ನು ನನ್ನ ಆಸ್ತಿ ಅಂತ ಘೋಷಣೆ ಮಾಡಿಕೊಂಡಿದ್ದೆ. ಅವರ ಹೆಸರಲ್ಲಿ ಎಷ್ಟು ಆಸ್ತಿ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದು ನನಗೆ ಗೊತ್ತಿಲ್ಲದೇ ಆಗಿರುವಂತಹ ತಪ್ಪು. ಮುಂದೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ರುಕ್ಮಿಣಿ ಮಾದೇಗೌಡ ಅವರ ಪತಿ ಮಾದೇಗೌಡ ಮಾತನಾಡಿ, ಮೂರು ತಿಂಗಳಾದರೂ ಸರಿ, ಆರು ತಿಂಗಳಾದರೂ ಸರಿ ಮೇಯರ್ ಆಗಾಯ್ತು.! ಪಾಲಿಕೆಯಲ್ಲಿ ಫೋಟೊ ಹಾಕಾಯ್ತು.ನಾವು ಅವಕಾಶಗಳಿಗೆ ಎಂದೂ ಬೆನ್ನು ತೋರಿದವರಲ್ಲ.ಸಿಕ್ಕಿರುವ ಅವಕಾಶದಲ್ಲಿ ಉತ್ತಮವಾದ ಕೆಲಸ ಮಾಡಿದ್ದೇವೆ.ಹೈ ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ಕೋರ್ಟ್ ಆದೇಶವನ್ನು ಗೌರವಿಸಿ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಮೈಸೂರಿನ ಮೊದಲ ಬೆಂಚ್ ನಲ್ಲಿ ನಮ್ಮ ಪರ ತೀರ್ಪು ಬಂದಿತ್ತು. ಬಳಿಕ ನಮ್ಮ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದರು.ಅಲ್ಲಿ ಪರಾಜಿತ ಅಭ್ಯರ್ಥಿಗೆ ಸದಸ್ಯತ್ವ ನೀಡುವಂತೆ ಆದೇಶ ಬಂತು. ಬಳಿಕ ನಾವು ಈ ಬಗ್ಗೆ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದೆವು.ಈಗ ಹೈಕೋರ್ಟ್ ಮರು ಚುನಾವಣೆಗೆ ಆದೇಶ ನೀಡಿದೆ. ಇದನ್ನ ನಮ್ಮ ವಿರುದ್ಧ ದಾವೆ ಹೂಡಿದವರಿಗೆ ಮುಖಭಂಗವಾಗಿದೆ. ನಮಗೆ ಶಿಕ್ಷೆ ಎಂದು ಭಾವಿಸೋದು ಬೇಡ. ಈ ಬಗ್ಗೆ ನಮ್ಮ ಹಿರಿಯರಿಂದ ಸಲಹೆ ಪಡೆದಿದ್ದೇನೆ.ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.