ಮೈಸೂರು: ಆಮೆ ವಿಗ್ರಹವನ್ನು ಬೀರುವಿನ ಕುಬೇರನ ಮೂಲೆಯಲ್ಲಿಟ್ಟರೆ ಒಳ್ಳೆಯದಾಗುತ್ತದೆ ಎಂದು ಹೇಳಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸರಸ್ವತಿಪುರಂನ ನಿವಾಸಿ ಅಕ್ಷಯ್ ಪಿ. ಪದಕಿ (26) ಬಂಧಿತ ಆರೋಪಿ. ಈತ ನಗರದ ಖಾಸಗಿ ಟ್ರಾವೆಲ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯ ಮುಂದೆ ಗಾರ್ಡನ್ ಮಾಡಿಕೊಡುತ್ತೇನೆ ಹಾಗೂ ಗಿಡಗಳ ಪಾಟ್‌ಗಳನ್ನು ವಾಸ್ತು ಪ್ರಕಾರ ಮರು ಜೋಡಣೆ ಮಾಡಿಕೊಡುತ್ತೇನೆಂದು ಹೇಳಿಕೊಂಡು ತಿರುಗುತ್ತಿದ್ದ.
ಅದರಂತೆ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಭಗಿನಿ ಸೇವಾ ಸಮಾಜ ಶಾಲೆಯ ಬಳಿಯ ಮನೆಯೊಂದರಲ್ಲಿ ವಾಸವಿದ್ದ ವಯೋವೃದ್ಧ ದಂಪತಿ ಪರಿಚಯ ಮಾಡಿಕೊಂಡು ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದ. 6 ತಿಂಗಳ ಹಿಂದೆ ಸ್ವಿಚ್ ಆಫ್ ಆಗಿದ್ದ ಫೋನ್ ನಂಬರನ್ನು ಅವರಿಗೆ ಕೊಟ್ಟು ನಂಬಿಸಿದ್ದು, ಆಮೆ ವಿಗ್ರಹವನ್ನು ಬೀರುವಿನ ಕುಬೇರನ ಮೂಲೆಯಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ. ಅದರಂತೆ ವಿಗ್ರಹ ಇಡಲು ಅವರು ಒಪ್ಪಿಗೆ ಸೂಚಿಸಿದ ನಂತರ ಆರೋಪಿಯು ಆಮೆ ವಿಗ್ರಹವನ್ನು ಬೀರುವಿನ ಒಳಗಡೆ ಇಡುವ ನೆಪದಲ್ಲಿ ಬೀರುವನ್ನು ತೆಗೆಸಿ ಆಮೆಯ ವಿಗ್ರಹವನ್ನು ಇಡುತ್ತಿದ್ದಾಗ ಕುಡಿಯಲು ನೀಡು ಕೊಡುವಂತೆ ಮನೆಯಲ್ಲಿದ್ದವರಿಗೆ ಕೇಳಿದ್ದನಂತೆ. ಈತನ ಮಾತನ್ನು ನಂಬಿ ನೀರು ತರಲು ಹೋದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ.
ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಹರಿಯಪ್ಪ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ಬಂಧಿತನಿಂದ 2 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ, 320 ಗ್ರಾಂ ಬೆಳ್ಳಿ, ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.