ಮೈಸೂರು: ಮೈಸೂರು ರಾಜ ಮನೆತನದ ಸುಪರ್ದಿಯಲ್ಲಿದ್ದ ನಾಲ್ಕು ಹೆಣ್ಣಾನೆಗಳನ್ನು ಗುಜರಾತ್ಗೆ ಸ್ಥಳಾಂತರಿಸಲಾಗಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಪ್ರೀತಿ ಪಾತ್ರವಾದ ಎರಡು ಆನೆಗಳನ್ನು ಅರಮನೆಯಲ್ಲಿ ಉಳಿಸಿಕೊಳ್ಳಲಾಗಿದೆ.
ಅರಮನೆಯಲ್ಲಿದ್ದ 6 ಆನೆಗಳ ಪೈಕಿ ನಾಲ್ಕು ಆನೆಗಳಾದ ಸೀತಾ(36), ರೂಬಿ(44), ಜೆಮಿನಿ(31) ಹಾಗೂ ರಾಜೇಶ್ವರಿ (27) ಆನೆಗಳನ್ನು ಗುಜರಾತ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಪ್ರೀತಿ ಪಾತ್ರವಾದ ಚಂಚಲ ಹಾಗೂ ಪ್ರೀತಿ ಆನೆಗಳನ್ನು ಅರಮನೆಯಲ್ಲಿ ಉಳಿಸಿಕೊಳ್ಳಲಾಗಿದೆ.
ನಾಲ್ಕು ಟ್ರಕ್ಗಳು ಆನೆಗಳನ್ನು ಹೊತ್ತುಕೊಂಡು ನಗರದಿಂದ ಗುಜರಾತ್ನ ಇಸ್ಕಾನ್ ಸಂಸ್ಥೆಯ ಒಡೆತನದಲ್ಲಿರುವ ಶ್ರೀ ರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿರುವ ಪುನರ್ ವಸತಿ ಕೇಂದ್ರಕ್ಕೆ ಪ್ರಯಾಣ ಬೆಳೆಸಿದವು.
ನ್ಯಾಯಾಲಯದ ಆದೇಶದಂತೆ ಜೆಮಿನಿ ಸರ್ಕಸ್ನಲ್ಲಿದ್ದ ಆನೆಗಳನ್ನು ರಕ್ಷಿಸಿದ ನಂತರ ಇವುಗಳ ಹೊಣೆಯನ್ನು ಅರಣ್ಯ ಇಲಾಖೆ ಹೊತ್ತುಕೊಳ್ಳಬೇಕಾಗಿತ್ತಾದರೂ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಆನೆಗಳನ್ನು ಸಲಹುವುದಾಗಿ ಒಪ್ಪಿಕೊಂಡು ವಶಕ್ಕೆ ಪಡೆದುಕೊಂಡಿದ್ದರು. ಈ ಆರು ಆನೆಗಳು ಅರಮನೆ ಆವರಣದಲ್ಲಿದ್ದು, ದಸರಾ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಪೂಜೆಯ ವೇಳೆ ಬಳಕೆಯಾಗುತ್ತಿದ್ದವು.
ಉಳಿದ ಅವಧಿಯಲ್ಲಿ ಅರಮನೆಯಲ್ಲಿನ ಆನೆ ಸಫಾರಿಯ ಪ್ರಮುಖ ಆಕರ್ಷಣೆಯಾಗಿದ್ದವು. ಆದರೆ, ಪ್ರಾಣಿ ದಯಾ ಸಂಘದವರು ಕೋರ್ಟ್‌ನಲ್ಲಿ ಆನೆಗಳನ್ನು ಹಿಂಸಿಸಲಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಆನೆ ಸಫಾರಿ ರದ್ದುಗೊಳಿಸಲಾಯಿತು.
ನಿರ್ವಹಣೆ ವೆಚ್ಚ ದುಬಾರಿ:
ಅರಮನೆಯಲ್ಲಿ ಆರು ಆನೆಗಳನ್ನು ಸಾಕುವುದು ದುಬಾರಿಯಾಗಿದ್ದು, ಇದರ ನಿರ್ವಹಣೆಗೆ ಸರ್ಕಾರ ಅಥವಾ ಅರಣ್ಯ ಇಲಾಖೆಯಿಂದ ಯಾವುದೇ ನೆರವು ಇಲ್ಲದ ಹಿನ್ನೆಲೆ, ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವುಗಳನ್ನು ಗುಜರಾತ್ನ ಇಸ್ಕಾನ್ ಸಂಸ್ಥೆಯ ಒಡೆತನದಲ್ಲಿರುವ ಶ್ರೀ ರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿನ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಯನ್ನು ಕೋರಿದ್ದರು.
ಆನೆಗಳಿಗೆ ಖಿನ್ನತೆ:
ಅರಮನೆಯಲ್ಲಿ ಗಂಡಾನೆಗಳು ಇಲ್ಲದಿರುವ ಕಾರಣ ಹೆಣ್ಣಾನೆಗಳಿಗೆ ಖಿನ್ನತೆ ಕೂಡ ಕಾಡಲಾರಂಭಿಸಿತ್ತು. ದಸರಾ ಸಂದರ್ಭದಲ್ಲಿ ಗಜಪಡೆ ಅರಮನೆಗೆ ಆಗಮಿಸಿದಾಗ ಸಂತೋಷದಿಂದ, ಸಕ್ರಿಯವಾಗಿರುತ್ತಿದ್ದ ಆನೆಗಳು ಅಲ್ಲಿಂದ ನಿರ್ಗಮಿಸಿದ ಬಳಿಕ ಮಂಕಾಗಿ ಖಿನ್ನತೆಗೆ ಒಳಗಾಗಿದ್ದವು. ಆನೆಗಳನ್ನು ಗುಜರಾತ್ಗೆ ಸ್ಥಳಾಂತರ ಮಾಡಲು ಇದು ಕೂಡ ಮುಖ್ಯ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ: ಖಂಡನಾ ನಿರ್ಣಯ ಕೈಗೊಂಡ ಸದನ
ಆನೆಗಳ ಸ್ಥಳಾಂತರಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಚನೆಯಂತೆ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಡಾ.ರಮೇಶ್ ಅವರು ಆನೆಗಳ ಆರೋಗ್ಯ ಪರಿಶೀಲಿಸಿ ದೃಢಿಕರಿಸಿದ್ದರು.
ಆನೆಗಳಿಗೆ ಟಿಬಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎನ್ನುವುದನ್ನು ಖಚಿತ ಪಡಿಸಿದ ನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.10 ರಿಂದ 31 ರೊಳಗೆ ಎಲ್ಲ ನಿಯಮ ಪಾಲಿಸಿ ಸ್ಥಳಾಂತರ ಮಾಡಲು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕು ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ.