ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿ 70 ಕೋಟಿ ವೆಚ್ಚದ ಕಾಮಗಾರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಗುದ್ದಲಿ ಪೂಜೆ ನೆರವೇರಿಸಿದರು.
ನಗರದ ಜೆ.ಕೆ.ಮೈದಾನದಲ್ಲಿ ಹಳೆಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ, ಪರೀಕ್ಷಾ ಕೊಠಡಿ ಹಾಗೂ ಗ್ರಂಥಾಲಯ ಕಟ್ಟಡ, ಬಾಲಕರ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಡಿಸಿಎಂ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮನುಕುಲಕ್ಕೆ ಉತ್ತಮ ಆರೋಗ್ಯ ಕಷ್ಟ. ಇದನ್ನು ಮನಗಂಡ ಮಹಾರಾಜರು ಜನರಲ್ಲಿ ಆರೋಗ್ಯವನ್ನು ಹೆಚ್ಚಿಸುವುದಕ್ಕಾಗಿ ಕೆ.ಆರ್.ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡಿರುವುದನ್ನು ಸ್ಮರಿಸಿದರು. ಕರ್ನಾಟಕದಲ್ಲೇ ಮೊದಲನೇ ಮೆಡಿಕಲ್ ಕಾಲೇಜು ಅಂದರೆ ಅದು ಕೆ.ಆರ್.ಆಸ್ಪತ್ರೆ, 2024ಕ್ಕೆ ನೂರು ವರ್ಷ ತುಂಬಲಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಜನರು ಹೋಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ಆಸ್ಪತ್ರೆಯ ಬೋಧಕ, ಬೋಧಕೇತರ ಸಿಬ್ಬಂದಿ, ರೋಗಿಗಳು ತಮ್ಮ ಕೊರತೆಗಳನ್ನು ಹೇಳಿಕೊಂಡಿದ್ದಾರೆ. ಅವರಿಗೆ ಅವಶ್ಯವಿರುವ ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಪುಷ್ಪಲತಾ ಜಗನಾಥ್, ಶಾಸಕರಾದ ಎಲ್.ನಾಗೇಂದ್ರ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಹೇಮಂತ್ ಕುಮಾರ್, ಮೈಸೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ಗಾಯತ್ರಿ, ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಪ್ರದೀಪ್ ಮತ್ತು ಇತರರು ಉಪಸ್ಥಿತರಿದ್ದರು.