ಮೈಸೂರು: ವಾಹನಕ್ಕೆ, ಮನುಷ್ಯರಿಗೆ ವಿಮೆ ಮಾಡಿಸುವುದನ್ನು ಕೇಳಿದ್ದೇವೆ ಆದರೆ ಇಲ್ಲೊಬ್ಬ ಕ್ಯಾಬ್ ಚಾಲಕ ತಮ್ಮ ಮನೆಯ ಮುಂದಿನ ರಸ್ತೆಗೆ ವಿಮೆ ಮಾಡಿಸುವ ಮೂಲಕ ಕುತೂಹಲಕ್ಕೆ ಕಾರಣನಾಗಿದ್ದಾನೆ.
ನಗರದ ಸಿ.ಎಫ್.ಟಿ.ಆರ್.ಐ ಬಡಾವಣೆಯ ವಾಸು ಎಂಬ ವ್ಯಕ್ತಿ ತಮ್ಮ ಮನೆ ಮುಂದಿನ ರಸ್ತೆಗೆ 3.23 ಲಕ್ಷ ಮೌಲ್ಯದ ವಿಮೆ ಮಾಡಿಸಿದ್ದು , ಅದಕ್ಕೆ ವರ್ಷಕ್ಕೆ ತಗುಲುವ 889 ರೂ ಹಣವನ್ನು ಕಟ್ಟಿದ್ದಾನೆ, ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ವಾಸು, ನೈಸರ್ಗಿಕ ಹಾಗೂ ಕಿಡಿಗೇಡಿಗಳಿಂದ ರಸ್ತೆಗೆ ಅಪಾಯವಾದರೆ ನಮಗೂ ತೊಂದರೆ, ಇದನ್ನು ಪಾಲಿಕೆಯವರಿಗೆ ಕೇಳಿದರೆ ಸಮಯ ತೆಗೆದುಕೊಳ್ಳುತ್ತಾರೆ ಆದ್ದರಿಂದ ನಾನೇ ಸ್ವಂತ ದುಡ್ಡಿನಲ್ಲಿ ಓರಿಯಂಟಲ್ ವಿಮಾ ಕಂಪನಿಯಲ್ಲಿ ವಿಮೆ ಮಾಡಿಸಿದೆ ಎನ್ನುತ್ತಾನೆ.
ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬರು ತಮ್ಮ ಮನೆಯ ಮುಂದಿನ ರಸ್ತೆಗೆ ವಿಮೆ ಮಾಡಿಸಿದ ವಿಚಾರ ತಿಳಿದು, ಅವರಿಂದ ಮಾಹಿತಿ ಸಂಗ್ರಹಿಸಿ, ಪಾಲಿಕೆ ಅಧಿಕಾರಿಗಳಿಂದ ಅನುಮತಿ ಪಡೆದು ವಿಮೆ ಮಾಡಿಸಿದ್ದೇನೆ ಎನ್ನುತ್ತಾರೆ ಕ್ಯಾಬ್ ಚಾಲಕ ವಾಸು.
ಮೆಚ್ಚುಗೆ ವ್ಯಕ್ತಪಡಿಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು.
ವಾಸು ರವರ ಈ ಕಾರ್ಯಕ್ಕೆ ಪಾಲಿಕೆ ಆಯುಕ್ತರು ಗುರುದತ್ತ ಹೆಗಡೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕರೊಬ್ಬರು ರಸ್ತೆಗೆ ವಿಮೆ ಮಾಡಿಸಿದ್ದು ಒಳ್ಳೆಯ ಕಾರ್ಯ, ಯಾರಾದರೂ ಆಸಕ್ತಿ ವಹಿಸಿದರೆ ಇನ್ನಷ್ಟು ರಸ್ತೆಗಳಿಗೆ ವಿಮೆ ಮಾಡಿಸಲು ಅನುಮತಿ ನೀಡಲಾಗುವುದು ಎಂದರು. ಸಾರ್ವಜನಿಕರು ಕೂಡಾ ವಾಸುರವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಸರ್ಕಾರದ ಅನುದಾನ ಬಡಾವಣೆಯಲ್ಲಿರುವ ನಿವಾಸಿಗಳು ಸ್ವಲ್ಪ ಸ್ವಲ್ಪ ಹಣ ಹಾಕಿ ಅಥವಾ ಒಂದು ಬಡಾವಣೆಯ ನಿವಾಸಿಗಳು ಸಂಘ ವಿಮೆ ಮಾಡಿಸಬಹುದಾಗಿದೆ.