ಮೈಸೂರು : ಬಿಟ್ ಕಾಯಿನ್ ಪ್ರಕರಣವನ್ನ (Bitcoin scam) ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ (KPCC spokesperson M Laxman) ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ (Bitcoin scam) ರಾಜಕಾರಣಿಗಳ ಜತೆ ಪೊಲೀಸ್ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಐಪಿಎಸ್ (IPS) ಅಧಿಕಾರಿಗಳು, ಅವರ ಸಂಬಂಧಿಕರ ಪಾತ್ರ ಇದೆ. ಈ ಪ್ರಕರಣ ಬಗ್ಗೆ ಸುಪ್ರೀಂಕೋರ್ಟ್ (Supreme Court) ಹಾಲಿ ನ್ಯಾಯಾಧೀಶರಿಂದ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು : ಕೂಡಲೇ ಶ್ರೀಕಿ ವಿರುದ್ದ ಎಫ್ಐಆರ್ (FIR) ದಾಖಲಿಸಿ. ಶ್ರೀಕಿ ಎಲ್ಲಿದ್ದಾನೆ ಎನ್ನುವ ಮಾಹಿತಿ ಬೇಕು. ಆತನನ್ನು 3 ಸಾವಿರ ಕಿ. ಮೀ ದೂರಕ್ಕೆ ಕರೆದುಕೊಂಡು ಹೋಗಲಾಗಿದೆ. ಆತನನ್ನು ಸಾಯಿಸಲು ಡ್ರಗ್ ಅಡಿಕ್ಟ್ (Drug Addict) ಮಾಡಲಾಗಿದೆ. ಡ್ರಗ್ ಖರೀದಿಸಲು ಬಿಟ್ ಕಾಯಿನ್ ಬಳಸಲಾಗಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಬಿಟ್ ಕಾಯಿನ್ (Bitcoin) ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಶ್ರೀಕಿ ರಾಜ್ಯ ಹಾಗೂ ಕೇಂದ್ರದ ಹಣ ಲೂಟಿ ಮಾಡಿದ್ದಾನೆ. 6 ಸಾವಿರ ಕೋಟಿ ಲೂಟಿ ಮಾಡಿದ್ದಾನೆ. ಆತನನ್ನು ಸ್ಟಾರ್ ಹೋಟೆಲ್‌ನಲ್ಲಿ ಇರಿಸಿ ತಿಂಗಳಿಗೆ 60 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಆಪಾದಿಸಿದರು.
1400 ಬಿಟ್ ಕಾಯಿನ್ ಕದಿಯಲಾಗಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಮೋದಿ ಅವರಿಗೆ ಮಾಹಿತಿ ನೀಡಿದ್ದರು. ಬೈಡನ್ ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ನೀವು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಾವು ಬೇರೆ ರೀತಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಹೊಂದಿದ ದೇಶದಲ್ಲಿ ಕಾನೂನುಬದ್ಧ : ಬಿಟ್ ಕಾಯಿನ್ ಅಂದ್ರೆ ಏನು ಎಂಬುವುದು ಸಾರ್ವಜನಿಕರಿಗೆ ಗೊತ್ತಿಲ್ಲ. ಬಿಟ್ ಕಾಯಿನ್ ಒಂದು ಡಿಜಿಟಲ್ ಕರೆನ್ಸಿ(Digital currency). ವಿದೇಶದಲ್ಲಿ ಇರುವ ಕರೆನ್ಸಿ, ಡಾಲರ್ ರೀತಿ ಇದು ಒಂದು. ಇದು ಅಭಿವೃದ್ಧಿ ಹೊಂದಿದ ದೇಶದಲ್ಲಿ ಕಾನೂನುಬದ್ಧ(Legalize) ವಾಗಿದೆ. ನಾವು ಬಿಜೆಪಿ ರೀತಿ ಹಿಟ್ ಅಂಡ್ ರನ್ ಹೇಳಿಕೆ ಕೊಡಲ್ಲ ಎಂದರು.
ಕಾಂಗ್ರೆಸ್ ಯಾಕೆ ಇದನ್ನ ಇಷ್ಟೊಂದು ಗಂಭೀರವಾಗಿ ಪರಿಗಣಿಸಿದೆ ಎಂದರೆ, ಹ್ಯಾಕರ್ ಶ್ರೀಕಿ ಹೈಕೋರ್ಟ್‌ಗೆ ಒಂದು ಅರ್ಜಿ ಹಾಕಿದ್ದಾನೆ. ಅದರಲ್ಲಿ ಆತನೆ ಹೇಳಿಕೊಂಡಿದ್ದಾನೆ. ರಾಹುಲ್ ಗಾಂಧಿ ಅಕೌಂಟ್ ಹ್ಯಾಕ್, NDTV, ಡೇಟಾ ಸೆಂಟರ್ ಸೇರಿ ಹಲವು ಗಣ್ಯರ ವೆಬ್‌ಸೈಟ್, ಟ್ವಿಟರ್ ಹ್ಯಾಕ್ ಮಾಡಿದ್ದಾನೆ. ಸರ್ಕಾರಿ ಹಣವನ್ನ ಹ್ಯಾಕ್ ಮಾಡಿದ್ದಾನೆ. ಇದನ್ನ ಸ್ವತಃ ಶ್ರೀಕಿ ತನ್ನ ಅಫಿಡೆವಿಟ್‌ನಲ್ಲಿ ಹಾಕಿಕೊಂಡಿದ್ದಾನೆ ಎಂದು ತಿಳಿಸಿದರು.
ಹ್ಯಾಕ್ ಮಾಡಲು ಕೋರ್ಸ್ ಮಾಡಿದ್ದೇನೆಂದು ಹೇಳಿಕೊಂಡಿದ್ದಾನೆ. ಆದರೆ, 2018ರಲ್ಲಿ ಈತನಿಗೆ ಪ್ರಸಿದ್ದ ಶೆಟ್ಟಿ ಜಾಮೀನು ನೀಡುತ್ತಾರೆ. ಈ ಪ್ರಸಿದ್ಧ ಶೆಟ್ಟಿ ನಳಿನ್ ಕುಮಾರ್ ಕಟೀಲ್ ಆಪ್ತ. ಬಿಜೆಪಿ ರಾಜ್ಯಾಧ್ಯಕ್ಷರ ಆಪ್ತನೇ ಇದರಲ್ಲಿ ಬೇಲ್ ಕೊಡ್ತಾರೆ ಅಂದ್ರೆ ಏನಾರ್ಥ? ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ನಮ್ಮ ಪಕ್ಷದವರು ಇದ್ದರೆ ಅಥವಾ ನಾನೇ ಇದ್ದರು ಜೈಲಿಗೆ ಹಾಕಿ. ಈ ಮಾತನ್ನ ನಮ್ಮ ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಯಾವ ಪಕ್ಷದವರು ಭಾಗಿಯಾಗಿದ್ದರು ಕ್ರಮ ಕೈಗೊಳ್ಳಿ ಎಂದರು.