ಮೈಸೂರು: ಇಂದು 'ವಿಶ್ವ ಶ್ರವಣ ದಿನಾಚರಣೆ' ಅಂಗವಾಗಿ ಮೈಸೂರಿನಲ್ಲಿ ಶ್ರವಣದೋಷ ಪರೀಕ್ಷಾ ಶಿಬಿರಕ್ಕೆ ನಟಿ ಅಮೂಲ್ಯ ಚಾಲನೆ ನೀಡಿದರು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನವಜಾತ ಶಿಶುಗಳಿಗೆ ಈ ಶ್ರವಣ ದೋಷ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು.
ಆಯುಷ್ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಡಿಯೋಲಜಿಸ್ಟ್‌ಗಳಿಂದ ನವಜಾತ ಶಿಶುಗಳಿಗೆ ಶ್ರವಣ ದೋಷ ಪತ್ತೆ ಮಾಡುವ ಸ್ಕ್ರೀನಿಂಗ್ ಶಿಬಿರವನ್ನು ಕೂಡಾ ಆಯೋಜಿಸಲಾಗಿತ್ತು. ಈ ಚಿಕಿತ್ಸೆ ಮೂಲಕ ಹುಟ್ಟಿದ ದಿನದಂದೇ ಮಕ್ಕಳ ಶ್ರವಣ ದೋಷವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಆ ದೋಷವನ್ನು ಗುಣಪಡಿಸಬಹುದಾಗಿದೆ. ಶಿಬಿರ ಉದ್ಘಾಟಿಸಿ ಮಾತನಾಡಿದ ಅಮೂಲ್ಯ, ಪೋಷಕರು ತಮ್ಮ ಮಕ್ಕಳ ಶ್ರವಣ ಪರೀಕ್ಷೆ ಮಾಡಿಸಿಕೊಂಡು ಆರಂಭದಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಎಂ. ಪುಷ್ಪಾವತಿ, ಅಮೂಲ್ಯ ಪತಿ ಜಗದೀಶ್ ಹಾಗೂ ಇನ್ನಿತರರು ಹಾಜರಿದ್ದರು.