ಬಂಟ್ವಾಳ: ವಿಚಾರವೊಂದಕ್ಕೆ ಸಂಬಂಧಿಸಿ ವಿಟ್ಲ ಪ.ಪಂ ಮಾಜಿ ಸದಸ್ಯರೊಬ್ಬರು ತನ್ನ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ ಎಂದು ಮನನೊಂದ ವಿಟ್ಲ ಪಟ್ಟಣ ಪಂಚಾಯತ್ನ ಪೌರಕಾರ್ಮಿಕ ರಾಜೇಶ್ ಎಂಬುವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೌರಕಾರ್ಮಿಕ ರಾಜೇಶ್ ಅವರನ್ನು ಬೆಂಬಲಿಸಿ, ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿ ಕೆಲ ಕಾಲ ಕೆಲಸ ಸ್ಥಗಿತಗೊಳಿಸಿ ಪ.ಪಂ ಮಾಜಿ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.
ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ರಾಜೇಶ್ ಅವರ ಮೇಲೆ ಲಂಚ ಕೇಳಿದ ಆರೋಪ ಹೊರಿಸಿ ಮೇಲಧಿಕಾರಿಗಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಈ ಹಿನ್ನೆಲೆ ಇಂದು ಬೆಳಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸ್ಸೇಜ್ ಕಳುಹಿಸಿದ್ದಾರೆ. ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಇದರಿಂದ ಮಾನಸಿಕವಾಗಿ ನೊಂದಿರುತ್ತೇನೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಬಳಿಕ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ.
ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ರಾಜೇಶ್ ಗಾಗಿ ಹುಟುಕಾಟ ಪ್ರಾರಂಭಿಸಿದ್ದಾರೆ. ಆ ವೇಳೆ ಅವರು ನೇತ್ರಾವತಿ ಸೇತುವೆ ಸಮೀಪ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ನೈಟ್, ವೀಕೆಂಡ್ ಕರ್ಫ್ಯೂ ಸಂಬಂಧ ನಾಳೆ ತೀರ್ಮಾನ : ಸಚಿವ ಅಶೋಕ್
ಲಂಚದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಮಗೆ ಕೂಡ ಕಿರುಕುಳ ನೀಡುತ್ತಿದ್ದು, ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಿ ಬಳಿಕ ಕೆಲಸ ಆರಂಭಿಸಲಿದ್ದೇವೆ ಎಂದು ಇತರೆ ಸಿಬ್ಬಂದಿ ತಿಳಿಸಿದ್ದು, ಅದರಂತೆ ಮನವಿ ಸಲ್ಲಿಸಿದ ಬಳಿಕ ಕೆಲಸಕ್ಕೆ ಹಾಜರಾದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ