ಮಂಗಳೂರು: ಎಂಎಸ್ಇಝಡ್ನಲ್ಲಿರುವ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಐದು ಮಂದಿ ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ವಿಷಾನಿಲ ಸೋರಿಕೆಯಿಂದ ಹಲವು ಮಂದಿ ಅಸ್ವಸ್ಥಗೊಂಡಿದ್ದಾರೆ. ಮಂಗಳೂರಿನ ಎಂಎಸ್ಇಝಡ್ (ಮಂಗಳೂರು ವಿಶೇಷ ಆರ್ಥಿಕ ವಲಯ)ನಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ.
ಪಶ್ಚಿಮ ಬಂಗಾಳದ ಉಮರ್ ಫಾರೂಕ್, ನಿಝಾಮುದ್ದೀನ್ ಸಾಬ್, ಸಮೀರುಲ್ಲಾ ಇಸ್ಲಾಂ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳ ಮೂಲದವರಾದ ಉಳಿದವರು ಗಂಭೀರವಾಗಿ ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೀನಿನ ಫ್ಯಾಕ್ಟರಿಯಲ್ಲಿ ರಾತ್ರಿ ವೇಳೆ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕ್ನ್ನು ಶುಚಿಗೊಳಿಸಲು ಕೆಳಗಿಳಿದಿದ್ದು, ಈ ಸಂದರ್ಭದಲ್ಲಿ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಇತರ ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡಾ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಐದು ಮಂದಿ ಮೃತಪಟ್ಟಿದ್ದರೆ, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತುಮಕೂರು: ಸಿಡಿಲು ಬಡಿದು ಕುರಿಗಾಯಿ ಸಾವು