ಮಂಗಳೂರು: ನಗರದ ವಿವಿಧೆಡೆಗಳಲ್ಲಿ ಜಾನುವಾರು ಕಳವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಎಸಿಪಿ ನೇತೃತ್ವದ ತಂಡ ದಸ್ತಗಿರಿ ಮಾಡಿದೆ.
ಮಂಗಳೂರಿನ ಕಸ್ಬಾ ಬೆಂಗ್ರೆಯ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್ ಸೆರೆಯಾದ ಆರೋಪಿ. ಈತನ ಮೇಲೆ ಮಂಗಳೂರು ನಗರದ ಪಾಂಡೇಶ್ವರ ದೇವಸ್ಥಾನದ ದನ ಕಳವು, ಉಳ್ಳಾಲ, ಕಂಕನಾಡಿ, ಬಜ್ಪೆ, ಪಣಂಬೂರು, ಉಪ್ಪಿನಂಗಡಿ, ಮಂಗಳೂರು ದಕ್ಷಿಣ ಠಾಣೆ, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ದನ ಕಳವುಗೈದ ಸುಮಾರು 14 ಪ್ರಕರಣಗಳು ದಾಖಲಾಗಿವೆ. ಆದರೆ ಈತ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತನ ಮೇಲೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಎಸಿಪಿ ರಾಮ ರಾವ್ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿ, ಮಂಗಳೂರು ಕಸ್ಬಾ ಬೆಂಗ್ರೆ ಬಳಿ ವಶಕ್ಕೆ ಪಡೆದು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.