ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಾಲಯ ಶೈಲಿಯ ಕುರುಹುಗಳು ಕಂಡುಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಮಸೀದಿಯ ಸಮೀಪದಲ್ಲಿರುವ ಶ್ರೀರಾಮಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಯುತ್ತಿದೆ. ಏಪ್ರಿಲ್ 21ರಂದು ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಮಸೀದಿ ನವೀಕರಣ ನಡೆಯುತ್ತಿದ್ದಾಗ ದೇಗುಲ ಶೈಲಿಯ ವಾಸ್ತುಶಿಲ್ಪ ಪತ್ತೆಯಾಗಿತ್ತು. ಆ ಬಳಿಕ ಯಾವುದೇ ಕಾಮಗಾರಿ ನಡೆಸದಂತೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಜ್ಯೋತಿಷ್ಯದಲ್ಲಿ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲ ನಡೆಸಲು ವಿ.ಹಿಂ.ಪ, ಬಜರಂಗದಳ ನಿರ್ಧರಿಸಿದೆ. ಇದರ ಪೂರ್ವಭಾವಿಯಾಗಿ ಮಸೀದಿಯ ಸ್ಥಳದಲ್ಲಿರುವ ದೈವಿಕ ಶಕ್ತಿ ಯಾವುದು, ಅಷ್ಟಮಂಗಲ ಪ್ರಶ್ನೆಯನ್ನು ಎಲ್ಲಿ ಮತ್ತು ಯಾವಾಗ ಇಡುವುದು ಎಂಬುದನ್ನು ತಿಳಿದುಕೊಳ್ಳಲು ತಾಂಬೂಲ ಪ್ರಶ್ನಾ ಚಿಂತನೆ ಇದೀಗ ಆರಂಭವಾಗಿದೆ.
ಕೇರಳದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಎಂಬವರು ತಾಂಬೂಲ ಪ್ರಶ್ನಾ ಚಿಂತನೆ ನಡೆಸುತ್ತಿದ್ದಾರೆ. ವಿಹಿಂಪ, ಬಜರಂಗದಳ ನಾಯಕರು ಭಾಗಿಯಾಗಿದ್ದಾರೆ. ತಾಂಬೂಲ ಪ್ರಶ್ನಾ ಚಿಂತನೆ ಆರಂಭಕ್ಕೆ ಮುಂಚೆ ಮಾತನಾಡಿದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್, 'ನಾನು ಈ ಊರಿಗೆ ಹೊಸಬ, ನನಗೇನೂ ವಿಷಯ ಗೊತ್ತಿಲ್ಲ. ತಾಂಬೂಲ ಪ್ರಶ್ನಾ ಚಿಂತನೆ ಆದ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ' ಎಂದು ಹೇಳಿದರು.
ಇದನ್ನೂ ಓದಿ: ಮಳಲಿ ಮಸೀದಿ ನವೀಕರಣ ವೇಳೆ ದೇಗುಲದ ಕುರುಹು ಪತ್ತೆ; ಇಂದು ತಾಂಬೂಲ ಪ್ರಶ್ನೆ