ಮಂಗಳೂರು: ಸಂವಿಧಾನದ 29 ಹಾಗೂ 30ನೇ ಕಲಂನ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ವಿಶೇಷ ಹಕ್ಕು ಮತ್ತು ಸೌಲಭ್ಯಗಳನ್ನು ಬಹುಸಂಖ್ಯಾತರ ಸಂಸ್ಥೆಗಳಿಗೂ ನೀಡುವ ಬಗ್ಗೆ ನಗರದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಭೆಯಲ್ಲಿ ಚರ್ಚೆ ಮಾಡಲಾಗವುದು ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರ ಕುಮಾರ್ ಜೈನ್ ತಿಳಿಸಿದ್ದಾರೆ.
ನಗರದ ಸಂಘನಿಕೇತನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ವಿಶೇಷ ಹಕ್ಕು ಮತ್ತು ಸೌಲಭ್ಯಗಳನ್ನು ಬಹುಸಂಖ್ಯಾತರ ಸಂಸ್ಥೆಗಳಿಗೂ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗವುದು. ಅಲ್ಪಸಂಖ್ಯಾತರಿಗೆ ಇದರಿಂದ ತೊಂದರೆ ಮಾಡುವ ಉದ್ದೇಶವಿಲ್ಲ. ಅವರ ಹಕ್ಕು ಹಾಗೂ ಸೌಲಭ್ಯಗಳನ್ನು ತಡೆ ಹಿಡಿಯಬೇಕೆಂಬ ಒತ್ತಾಯವನ್ನು ಮಾಡುತ್ತಿಲ್ಲ. ಆದರೆ, ಅದೇ ಹಕ್ಕು ಹಾಗೂ ಸೌಲಭ್ಯಗಳನ್ನು ಬಹುಸಂಖ್ಯಾತರಿಗೂ ನೀಡಲಿ ಎಂದು ಹೇಳಿದರು.
ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹಿಂದೂ ವಿರೋಧಿ ಹಾಗೂ ಸಂವಿಧಾನ ವಿರೋಧಿ ನೀತಿಯನ್ನು ಜಾರಿಗೆ ತರಲಾಗಿದೆ. ಇಲ್ಲಿನ ಪಾದ್ರಿಗಳು ಹಾಗೂ ಮೌಲ್ವಿಗಳಿಗೆ ಅಧಿಕ ಸಂಭಾವನೆ ನೀಡಲಾಗುತ್ತಿದೆ. ಆದರೆ, ಪುರೋಹಿತರಿಗೆ ಈ ಸಂಭಾವನೆ ಇಲ್ಲ. ಆದ್ದರಿಂದ ಈ ಎರಡೂ ಸರ್ಕಾರಗಳ ವಿರುದ್ಧ ಆಂದೋಲನ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಇಂದು ಭಾರತದಲ್ಲಿ ಮಹಿಳೆಯರ ಸ್ಥಿತಿ ಬಹು ದುಸ್ತರವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅಧಿಕವಾಗುತ್ತಿದ್ದು, ಅಸುರಕ್ಷಿತ ಸ್ಥಿತಿ ನಿರ್ಮಾಣ ವಾಗಿದೆ. ಮಹಿಳೆಯರ ರಕ್ಷಣೆ ಕೇವಲ ಸರ್ಕಾರಕ್ಕೆ ಸೀಮಿತವಾದುದಲ್ಲ. ಸಮಾಜಕ್ಕೂ ಅಷ್ಟೇ ಹೊಣೆಗಾರಿಕೆ ಇದೆ. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಈ ಬಗ್ಗೆಯೂ ಬೈಠಕ್ನಲ್ಲಿ ಮಹತ್ವದ ಚರ್ಚೆ ನಡೆಯುತ್ತದೆ.
ಇದೇ ವೇಳೆ, ಒಆರ್ಪಿ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಾಗುತ್ತದೆ. ಆದಿವಾಸಿಗಳನ್ನು ಹಿಂದೂಯೇತರರು ಎಂದು ಬಿಂಬಿಸುವ ಷಡ್ಯಂತರ ಬಹುದಿನಗಳಿಂದ ನಡೆಯುತ್ತಾ ಬರುತ್ತಿದೆ. ಹಿಂದುಗಳಿಂದ ಆದಿವಾಸಿಗಳನ್ನು ಪ್ರತ್ಯೇಕಿಸುವ ಕಾರ್ಯ ಬ್ರಿಟಿಷರು ಆರಂಭಿಸಿದ್ದರು. ಇದೀಗ ಅವರನ್ನು ಮನವೊಲಿಸುವ ಕಾರ್ಯ ಆಗಬೇಕಿದೆ. ಆದ್ದರಿಂದ ಮತಾಂತರದ ಬಗ್ಗೆಯೂ ಮಹತ್ವಪೂರ್ಣವಾದ ಚರ್ಚೆ ಈ ಅಂತಾರಾಷ್ಟ್ರೀಯ ಬೈಠಕ್ನಲ್ಲಿ ನಡೆಯಲಿದೆ ಎಂದರು.
ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ಕುರಾನ್ ಮತ್ತು ಬೈಬಲ್ಗಳ ಬಗ್ಗೆ ಅರಿವು ಮೂಡಿಸುವಂತೆ ಹಿಂದೂಗಳಿಗೂ ಗೀತೆ ಹಾಗೂ ವೇದಗಳ ಅಧ್ಯಯನ ನಡೆಸಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ. ಬೈಬಲ್-ಕುರಾನ್ಗಳಿಗಿಂತಲೂ ಉನ್ನತವಾದ ವಿಚಾರಗಳು ಭಾರತೀಯರ ರಾಮಾಯಣ, ಮಹಾಭಾರತ, ವೇದ, ಉಪನಿಷತ್ಗಳಲ್ಲಿ ಇದೆ. ಆದ್ದರಿಂದ ಇವುಗಳನ್ನು ಶಿಕ್ಷಣದ ಭಾಗವಾಗಿ ತೆಗೆದುಕೊಳ್ಳುವ ಅನಿವಾರ್ಯತೆ ತುರ್ತಾಗಿ ಆಗಬೇಕಿದೆ ಎಂದರು.