ಕಾರವಾರ: ಇದೀಗ ಮಳೆಗಾಲ ಆರಂಭವಾಗಿದ್ದು, ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಈ ಸಮಯದಲ್ಲಿ ಕರಾವಳಿಯಾದ್ಯಂತ ಆಳ ಸಮುದ್ರದ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದರಿಂದ ತಾಜಾ ಮೀನಿನ ಕೊರತೆ ಎದುರಾಗಿದೆ. ಈ ಕಾರಣದಿಂದ ಕರಾವಳಿಯ ಜನ ಒಣ ಮೀನಿನ ಖರೀದಿಗೆ ಮುಂದಾಗಿದ್ದಾರೆ.
ಇನ್ನು ಆಳ ಸಮುದ್ರದ ಮೀನುಗಾರಿಕೆ ಬಂದ್ ಆಗುತ್ತಿದ್ದಂತೆ ಒಣ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಮೀನಿನ ದರ ಗಗನಕ್ಕೇರಿದೆ. ದೋಡಿ 100 ರೂ., ಬಂಗುಡೆ 100ಕ್ಕೆ 1500ರಿಂದ 1800 ರೂ., ಮೋರಿ 2 ಮೀನಿಗೆ 1400 ರೂ., ಪೇಡಿಬುಟ್ಟಿಗೆ 200 ರೂ., ಬೆಳ್ಳುಂಜಿ ಬುಟ್ಟಿಗೆ 500 ರೂ. ಹೀಗೆ ಮೀನಿನ ದರ ಇದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಕೆಲ ಮೀನಿನ ದರ 50 ರೂಪಾಯಿಯಿಂದ 200 ರೂ.ವರೆಗೂ ಹೆಚ್ಚಳವಾಗಿದೆ. ಇನ್ನು ಕಾರವಾರ ಮಾರುಕಟ್ಟೆಗೆ ಸ್ಥಳೀಯರಲ್ಲದೇ ದೂರದ ಗೋವಾ, ಮಹರಾಷ್ಟ್ರದ ಜನರು ಬಂದು ಒಣ ಮೀನು ಖರೀದಿ ಮಾಡುತ್ತಾರೆ. ಆದರೆ ಈ ಬಾರಿ ಮತ್ಸ್ಯ ಕ್ಷಾಮ ಕಾಣಿಸಿಕೊಂಡಿದ್ದು, ಹಸಿ ಮೀನಿನ ಕೊರತೆ ಎದುರಾಗಿತ್ತು. ಇದರಿಂದ ಒಣ ಮೀನಿಗೆ ಮೇ ತಿಂಗಳ ಆರಂಭದಿಂದಲೇ ಬೇಡಿಕೆ ಹೆಚ್ಚಾಗಿದೆ. ಅದರ ಜತೆಗೆ ದರ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಮೀನು ಮಾರಾಟಗಾರ ಮಹಿಳೆಯರು.
ಕರಾವಳಿಯ ಬಹುತೇಕರಿಗೆ ಮೀನು ಬೇಕೆ ಬೇಕು. ಆದರೆ ಇದೀಗ ಮೀನುಗಾರಿಕೆ ಬಂದ್ ಆಗಿದ್ದರಿಂದ ಬಹುತೇಕರು ಒಣ ಮೀನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಮಳೆಗಾಲದ ಮೂರು ತಿಂಗಳೂ ಈ ಒಣ ಮೀನಿನ ಮೂಲಕವೇ ಖಾದ್ಯ ತಯಾರಿಸುತ್ತಾರೆ. ಈ ಕಾರಣದಿಂದಲೇ ಮೀನು ಖಾದ್ಯ ಪ್ರಿಯರು ಬೆಲೆ ಹೆಚ್ಚಾಗಿದ್ದರೂ ಲೆಕ್ಕಿಸದೇ ಒಣ ಮೀನು ಖರೀದಿಗೆ ಮುಂದಾಗಿದ್ದಾರೆ. ಏನೇ ಆಗ್ಲಿ ಮೀನಿಲ್ಲದೇ ಮಳೆಗಾಲ ಕಳೆಯುವುದು ಕಷ್ಟ ಮಾರಾಯ್ರೆ ಎನ್ನುತ್ತಾರೆ ಸ್ಥಳೀಯರು.