ಮಂಗಳೂರು : ನಗರದ ವಿವಿಧೆಡೆ ನದಿ ಬದಿಯಲ್ಲಿ ಟೆಂಟ್ ಹಾಕಿಕೊಂಡು ಬದುಕು ಸಾಗಿಸುತ್ತಿರುವ ಹಾಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಶಿಳ್ಳೆಕ್ಯಾತ ಸಮುದಾಯದ ಜನರ ಬದುಕು ಲಾಕ್ಡೌನ್ ಹಾಗೂ ಚಂಡಮಾರುತದಿಂದಾಗಿ ಅಕ್ಷರಶಃ ಮೂರಾಬಟ್ಟೆಯಾಗಿದೆ.
ಅಲೆಮಾರಿ ಜನಾಂಗಕ್ಕೆ ಸೇರಿದ ಶಿಳ್ಳೆಕ್ಯಾತ ಸಮುದಾಯದ ಜನರು ಮಂಗಳೂರಿನ ಹೊಯಿಗೆ ಬಜಾರ್, ಜೆಪ್ಪಿನಮೊಗರು, ತಣ್ಣೀರುಬಾವಿ ಸೇರಿದಂತೆ ವಿವಿಧೆಡೆ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇವರು ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಆದರೆ, ಮಳೆಗಾಲ ಬಂತೆಂದರೆ ದುಡಿಮೆ ಬಂದ್ ಆಗುತ್ತದೆ. ಮಳೆಗಾಲದಲ್ಲಿ ತೆಪ್ಪದಲ್ಲಿ ಹೋಗಿ ಮೀನು ಹಿಡಿಯಲು ಅಸಾಧ್ಯವಾಗಿರುವುದರಿಂದ, ಈ ಸಂದರ್ಭದಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುತ್ತಾರೆ.
ಇದೀಗ ಲಾಕ್ಡೌನ್ ಹಾಗೂ ತೌಕ್ತೆ ಚಂಡಮಾರುತದಿಂದಾಗಿ ಮೀನು ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಶಿಳ್ಳೆಕ್ಯಾತ ಸಮುದಾಯದರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಮೂಲತಃ ಚಿಕ್ಕಮಗಳೂರಿನಿಂದ ವಲಸೆ ಬಂದ ಶಿಳ್ಳೆಕ್ಯಾತರು, ಒಂದೂರಿನಿಂದ ಮತ್ತೊಂದು ಊರಿಗೆ ವಲಸೆ ಹೋಗುತ್ತಿದ್ದರು. ಆದರೆ, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂಬ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಮಂಗಳೂರಿನ ವಿವಿಧೆಡೆ ಬದುಕು ಕಟ್ಟಿಕೊಂಡಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಡಿವೈಎಫ್ಐ ಮುಖಂಡರು ಇವರಿಗೆ ಆಧಾರ್ ಕಾರ್ಡ್, ವೋಟರ್ ಐಡಿ ಮಾಡಿಸಿಕೊಟ್ಟಿದ್ದಾರೆ. ಆದರೆ, ಸರ್ಕಾರ ಇವರಿಗೆ ಸೂರಿನ ವ್ಯವಸ್ಥೆಯನ್ನಾಗಲಿ ಹಾಗೂ ಮೂಲಸೌಕರ್ಯಗಳನ್ನಾಗಲಿ ಒದಗಿಸಿಲ್ಲ.
ಓದಿ: ಮದುವೆ ವೇಳೆ ಮಂಗಳಸೂತ್ರವನ್ನೇ ಎಗರಿಸಿದ ಐನಾತಿ ಅರ್ಚಕ: ವಿಡಿಯೋ ನೋಡಿ