ಮಂಗಳೂರು: ಕೋವಿಡ್- 19 ಕಾಯಿಲೆಯಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗವು ವಿಶ್ವವನ್ನು ಕಾಡುತ್ತಿದೆ. ಆ ಮಹಾಮಾರಿಯೇ ಮಂಕಿಪಾಕ್ಸ್ ಅಥವಾ ಮಂಗನ ಕಾಯಿಲೆ. ಆಫ್ರಿಕಾದ ಮಧ್ಯಭಾಗದಲ್ಲಿ ಹಬ್ಬುತ್ತಿದೆ. ಯುರೋಪಿಯನ್ ಖಂಡದ ಸ್ವೀಡನ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಈಗಾಗಲೇ ಮಂಗನ ಕಾಯಿಲೆಗೆ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನೂ ಘೋಷಣೆ ಮಾಡಿದೆೆ. ಆಫ್ರಿಕಾದಲ್ಲಿ ದೇಶದಲ್ಲಿ ಆತಂಕ ಸೃಷ್ಟಿಸಿದ ಮಂಕಿಪಾಕ್ಸ್ನ ಎರಡು ಪ್ರಕರಣ ಭಾರತ ದೇಶದಲ್ಲೂ ಪತ್ತೆಯಾಗಿದೆ. ಈ ಮಂಗನ ಕಾಯಿಲೆಯ ಎಷ್ಟು ವಿಧಗಳಿವೆ? ಈ ರೋಗದ ಲಕ್ಷಣಗಳೇನು? ಇದು ಹೇಗೆ ಹರಡುತ್ತದೆ? ಎಂಬುದರ ವಿವರಗಳು ತಿಳಿಯೋಣ.
ಮಂಕಿ ಪಾಕ್ಸ್ ಮಂಗನಿಂದ ಹರಡಿದ ಖಾಯಿಲೆ ಅಲ್ಲ!: ಮಂಕಿ ಪಾಕ್ಸ್ ಎಂಬುದು ಮಂಗನಿಂದ ಹರಡುವ ಖಾಯಿಲೆ ಎಂಬ ತಪ್ಪು ಕಲ್ಪನೆ ಇದೆ. ಇದರ ಹೆಸರಿನಲ್ಲಿ ಮಂಕಿ ಎಂಬುದು ಇರುವುದರಿಂದ ಈ ತಪ್ಪು ಕಲ್ಪನೆಯಿದೆ. ವಾಸ್ತವವಾಗಿ ಇದೊಂದು ವೈರಸ್‌ನಿಂದ ಹರಡುವ ಖಾಯಿಲೆ. ಈ ಖಾಯಿಲೆ ಸಂಶೋಧನೆ ಮಾಡುವಾಗ ಇದು ಮಂಗನಲ್ಲಿ ಕಾಣಿಸಿಕೊಂಡ ಕಾರಣ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. ಈ ವೈರಸ್ ಉಳಿದ ಪ್ರಾಣಿಗಳಲ್ಲೂ ಕಂಡು ಬರುತ್ತದೆ.
ಮಂಕಿ ಪಾಕ್ಸ್ ಎಂದರೇನು?: ಮಂಕಿ ಪಾಕ್ಸ್ ಎಂಬುದು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮೊದಲ ಬಾರಿಗೆ 1958ರಲ್ಲಿ ಡೆನ್ಮಾರ್ಕ್‌ನಲ್ಲಿ ಪತ್ತೆಯಾಯಿತು. ಇದು ಸಿಡುಬು ರೋಗವನ್ನು ಹೋಲುತ್ತದೆ. "ಮಂಕಿಪಾಕ್ಸ್ ವೈರಸ್" ಎಂದು ಕರೆಯಲಾಗಿದ್ದರೂ ಈ ವೈರಸ್ ಮೂಲವು ಇನ್ನೂ ತಿಳಿದಿಲ್ಲ. ಅಳಿಲು, ಸಸ್ತನಿಗಳಲ್ಲಿ ಈ ವೈರಸ್ ಕಂಡು ಬರುತ್ತದೆ. ಈ ವೈರಸ್ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಮಂಕಿ ಪಾಕ್ಸ್ ಹರಡುವಿಕೆ ಬಗ್ಗೆ ಎಚ್ಚರಿಕೆ ನೀಡಿದೆ. 2022ರಲ್ಲಿ 70 ಕ್ಕೂ ಹೆಚ್ಚು ದೇಶಗಳಿಗೆ ಮಂಕಿ ಪಾಕ್ಸ್ ಹರಡಿತ್ತು. ಈ ವರ್ಷದ ಮಂಕಿ ಪಾಕ್ಸ್ ಹೊಸ ರೂಪಾಂತರವು ಕಾಂಗೋ ಮತ್ತು ನೆರೆಯ ದೇಶಗಳಲ್ಲಿ ಕಾಣಿಸಿಕೊಂಡಿದೆ. ಮಧ್ಯ ಆಫ್ರಿಕಾದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ನೆರೆಹೊರೆಯ ದೇಶಗಳಲ್ಲಿ ಮಂಕಿ ಪಾಕ್ಸ್ (Monkey Pox) ವೈರಸ್‌ನ ಹೊಸ ರೂಪಾಂತರದ ಆತಂಕ ಮೂಡಿಸಿದೆ.
ಚಿಕಿತ್ಸೆ: ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದ್ದರೆ ಮತ್ತು ಚರ್ಮ ರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸೇರಿದಂತೆ ಸೂಕ್ತವಾದ ವೃತ್ತಿಪರ ಆರೈಕೆ ಚೇತರಿಸಿಕೊಳ್ಳಬಹುದು. ರಾಜ್ಯದಲ್ಲಿ ಈವರೆಗೆ ಒಂದೂ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿಲ್ಲ.
ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸವೇನು?: ಮಂಕಿ ಪಾಕ್ಸ್ ಕಾಯಿಲೆಯು ಚಿಕನ್ ಪಾಕ್ಸ್ ಖಾಯಿಲೆಯನ್ನು ಹೋಲುತ್ತದೆ. ದೇಶದಲ್ಲಿ ಸಾಮಾನ್ಯವಾಗಿರುವ ಚಿಕನ್ ಪಾಕ್ಸ್ ಮತ್ತು ಮಂಕಿ ಪಾಕ್ಸ್ಗೂ ಸಾಕಷ್ಟು ವ್ಯತ್ಯಾಸವಿದೆ. ಚಿಕನ್ ಪಾಕ್ಸ್ನಲ್ಲಿ ಮೈ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಂಡರೆ, ಮಂಕಿಪಾಕ್ಸ್ನಲ್ಲಿ ಸ್ವಲ್ಪ ದೊಡ್ಡ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.
ಚಿಕನ್ ಪಾಕ್ಸ್ ಚಿಕ್ಕ ಮಟ್ಟದಲ್ಲಿ ಹರಡಿದರೆ, ಮಂಕಿಪಾಕ್ಸ್ ದೊಡ್ಡ ಮಟ್ಟದಲ್ಲಿ ಹರಡುವಿಕೆ ಪ್ರಮಾಣವನ್ನು ಹೊಂದಿದೆ. ಚಿಕನ್ ಪಾಕ್ಸ್ನ ಕಲೆಗಳು ಕೆಲಸಮಯದ ಬಳಿಕ ಅಳಿಸಿಹೋದರೆ, ಮಂಕಿ ಪಾಕ್ಸ್ನ ಕಲೆಗಳು ಮೈ ಮೇಲೆ ಧೀರ್ಘ ಕಾಲದವರೆಗೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಈ ರೋಗ ಹೇಗೆ ಹರಡುತ್ತೆ?: ಕಣ್ಣು, ಬಾಯಿ, ಚರ್ಮ, ಮೂಗಿನಿಂದ ಸ್ರವಿಸುವ ದ್ರವ ಮತ್ತು ಉಸಿರಾಟದ ಮೂಲಕ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಎಂಪಾಕ್ಸ್ ಇರುವ ಜನರ ನಿಕಟ ಸಂಪರ್ಕಕ್ಕೆ ಬಂದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುವ ಮುನ್ನವೇ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಎಂಪಾಕ್ಸ್ನ ಲಕ್ಷಣಗಳೇನು?: ಸಾಮಾನ್ಯವಾಗಿ ಈ ವೈರಲ್ ಸೋಂಕು ಗುದದ್ವಾರ, ಜನನಾಂಗ, ಎದೆ, ಮುಖ ಅಥವಾ ಬಾಯಿಯ ಮೇಲೆ ದದ್ದುಗಳಿಂದ ಪ್ರಾರಂಭವಾಗುತ್ತದೆ. ಅನಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಬಹುದು. ದದ್ದುಗಳು ನೋವಿನಿಂದ ಕೂಡಿರುತ್ತವೆ. ತುರಿಕೆಯು ಹೆಚ್ಚಾಗಿರುತ್ತದೆ. ಈ ದದ್ದುಗಳು ಮೊಡವೆ ಅಥವಾ ಗುಳ್ಳೆಗಳನ್ನು ಹೋಲುತ್ತವೆ. ಜ್ವರ, ತಲೆನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಸ್ನಾಯು ನೋವು ಅಥವಾ ಶೀತ ಇತರ ರೋಗಲಕ್ಷಣಗಳಾಗಿವೆ. ಸುಮಾರು ನಾಲ್ಕು ವಾರಗಳವರೆಗೆ ಕಾಡುವ ಈ ಸೋಂಕು ಕೀವು ತುಂಬಿದ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ.
ವೈರಸ್ಗೆ ಒಡ್ಡಿಕೊಂಡ 21 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಆರಂಭವಾಗುತ್ತವೆ. ಗಾಯಗಳು ಸೋಂಕಿಗೆ ಒಳಗಾದಾಗ ಅಪಾಯಕಾರಿಯಾಗಬಹುದು. ಅತಿಸಾರ, ವಾಂತಿ, ನ್ಯುಮೋನಿಯಾ, ಮೆದುಳಿನ ಉರಿಯೂತ, ನಿರ್ಜಲೀಕರಣ, ಉಸಿರಾಟದ ತೊಂದರೆಗಳೂ ಕೆಲವರಲ್ಲಿ ಕಾಣಿಸಿಕೊಳ್ಳಬಹುದು.
ಯಾರಿಗೆ ಹೆಚ್ಚು ಆಪಾಯ?: ರೋಗನಿರೋಧಕ ಶಕ್ತಿ ಹೊಂದಿಲ್ಲದವರು ಈ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ. ಲೈಂಗಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಗರ್ಭಿಣಿಯರು, ಒಂದು ವರ್ಷದೊಳಗಿನ ಮಕ್ಕಳು, ಎಸ್ಟಿಮಾದಂತಹ ಕಾಯಿಲೆ ಹೊಂದಿರುವವರಿಗೆ ಇದರ ಅಪಾಯ ಅಧಿಕವಾಗಿರುತ್ತದೆ.
ಮಂಕಿ ಪಾಕ್ಸ್ ತಡೆಯುವುದು ಹೇಗೆ?: ಸೋಂಕಿತರು ಎರಡರಿಂದ ನಾಲ್ಕು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸೋಂಕಿತರಿಂದ ದೂರವಿರುವುದು, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ ಅವರ ಕಾಳಜಿ ಮಾಡುವುದರಿಂದ ಸೋಂಕು ಹರಡುವ ಅಪಾಯ ಕಡಿಮೆ ಮಾಡಬಹುದು. ಸೋಂಕಿತರು ಮನೆಯಲ್ಲಿ ಇದ್ದರೆ ಆದಷ್ಟು ಸ್ವಚ್ಛತೆ ಪಾಲಿಸಬೇಕಾಗುತ್ತದೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾತನಾಡಿ, ''ವೈರಸ್‌ನಿಂದ ಬರುವ ಮಂಕಿ ಪಾಕ್ಸ್ ಒಬ್ಬರಿಂದ ಒಬ್ಬರಿಗೆ ತುಂಬಾ ಸುಲಭವಾಗಿ ಹರಡುತ್ತದೆ. ಮಂಕಿಪಾಕ್ಸ್ ಬಂದವರಲ್ಲಿ ಗುಳ್ಳೆಗಳು ಬಂದು, ಅದು ಹೊಡೆದು ಬಳಿಕ ಸರಿಯಾಗುತ್ತದೆ. ಇದರಲ್ಲಿ ಶೇಕಡಾ 95 ಮಂದಿ ಗುಣಮುಖರಾಗುತ್ತಾರೆ. ಶೇಕಡಾ 5 ಜನರಲ್ಲಿ ಇದು ಮಾರಣಾಂತಿಕವಾಗಿ ಪರಿಣಾಮ ಬೀರುತ್ತದೆ'' ಎಂದು ತಿಳಿಸುತ್ತಾರೆ.
''ಚಿಕನ್ ಪಾಕ್ಸ್ ರೋಗವನ್ನು ಹೋಲುವ ಮಂಕಿಪಾಕ್ಸ್ಗೆ ತುಂಬಾ ವ್ಯತ್ಯಾಸವಿದೆ. ಮಂಕಿಪಾಕ್ಸ್ನಲ್ಲಿ ಗುಳ್ಳೆಗಳು ದೊಡ್ಡದಾಗಿ ಇಡೀ ಮೈಮೇಲೆ ಬಿದ್ದಿರುತ್ತದೆ. ಇದರ ಜೊತೆಗೆ ತಲೆನೋವು, ವಿಪರೀತ ಜ್ವರ ಮೈಕೈ ನೋವು ಇರುತ್ತದೆ. ಆಫ್ರಿಕನ್ ದೇಶದಲ್ಲಿ ಇದು ಹೆಚ್ಚಾಗಿ ಕಂಡುಬಂದಿದ್ದು, ಈ ದೇಶಕ್ಕೆ ಹೋಗಿ ಬಂದವರಲ್ಲಿ ಈ ಲಕ್ಷಣ ಇದ್ದರೆ ಅವರನ್ನು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಜನರು ಗಾಬರಿಯಾಗುವ ಅಗತ್ಯ ಇಲ್ಲ'' ಎಂದು ಸಲಹೆ ನೀಡುತ್ತಾರೆ.
ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.