Pragyan Rover Finds Crater In Moon: ಚಂದ್ರಯಾನ-4 ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಅನುಮೋದಿಸಿದೆ. ಇದಕ್ಕಾಗಿ ವಿಜ್ಞಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇದೇ ವೇಳೆ ಚಂದ್ರಯಾನ-3 ತನ್ನ ಕೆಲಸವನ್ನು ಮುಂದುವರಿಸಿದೆ. ಸೆಪ್ಟಂಬರ್ 2023ರಲ್ಲಿ ಗಾಢ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಇನ್ನೂ ಒಂದು ವರ್ಷ ಕೆಲಸ ಮಾಡುವುದರಲ್ಲಿ ನಿರತವಾಗಿವೆ. ಈ ಉಪಕರಣಗಳು ಚಂದ್ರನಿಂದ ಭೂಮಿಗೆ ಮಾಹಿತಿ ಕಳುಹಿಸುತ್ತಿವೆ. ಇದೀಗ ಚಂದ್ರನ ಮೇಲ್ಮೈಯಲ್ಲಿ ಬೃಹತ್ ಕುಳಿಯೊಂದನ್ನು ಪ್ರಗ್ಯಾನ್ ಪತ್ತೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಂದ್ರನ ದಕ್ಷಿಣ ಧ್ರುವದಿಂದ ಪ್ರಗ್ಯಾನ್ ಕಳುಹಿಸಿದ ಈ ದತ್ತಾಂಶವು ಹೊಸ ಪ್ರಾಚೀನ ಕುಳಿಗಳನ್ನು ಬಹಿರಂಗಪಡಿಸಿದೆ. ಈ ಕುಳಿ ಸುಮಾರು 160 ಕಿ.ಮೀ ಅಗಲವಿದೆ ಎಂದು ತಿಳಿದುಬಂದಿದೆ. ಇದು ಚಂದ್ರಯಾನ-3 ಇಳಿಯುವ ಸ್ಥಳದ ಸಮೀಪದಲ್ಲಿದೆ ಎಂದು ಹೇಳಲಾಗುತ್ತಿದೆ. ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬ್‌ನ ವಿಜ್ಞಾನಿಗಳು ಪ್ರಕಟಿಸಿರುವ ಸೈನ್ಸ್ ಡೈರೆಕ್ಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಿದೆ.
ವರದಿಯ ಪ್ರಕಾರ, ದಕ್ಷಿಣ-ಧ್ರುವ ಅಟ್ಕಿನ್ ಬೇಸಿನ್ ರಚನೆಗೆ ಮುಂಚೆಯೇ ಈ ಕುಳಿ ರೂಪುಗೊಂಡಿರಬಹುದು ಎಂದು ನಂಬಲಾಗಿದೆ. ವಿಶೇಷವೆಂದರೆ, ದಕ್ಷಿಣ ಧ್ರುವ-ಅಟ್ಕಿನ್ ಜಲಾನಯನ ಪ್ರದೇಶವು ಚಂದ್ರನ ಮೇಲ್ಮೈಯಲ್ಲಿರುವ ಅತಿದೊಡ್ಡ ಮತ್ತು ಹಳೆಯ ಪ್ರಭಾವದ ಜಲಾನಯನ ಪ್ರದೇಶ. ಪ್ರಗ್ಯಾನ್ ರೋವರ್ ತೆಗೆದ ಚಿತ್ರಗಳು ಈ ಪ್ರಾಚೀನ ಕುಳಿಯ ರಚನೆಯ ಬಗ್ಗೆ ಮಾಹಿತಿ ಒದಗಿಸಿವೆ. ಇದು ಚಂದ್ರನ ಬಗ್ಗೆ ಅನೇಕ ಪ್ರಮುಖ ಸುಳಿವುಗಳನ್ನು ನೀಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕ್ರೇಟರ್ ಸೇರಿದಂತೆ ಪ್ರಗ್ಯಾನ್ ರೋವರ್ನಿಂದ ಬಂದಿರುವ ಮಾಹಿತಿ ವಿಶ್ವದಾದ್ಯಂತ ವಿಜ್ಞಾನಿಗಳ ಉತ್ಸಾಹ ಹೆಚ್ಚಿಸಿದೆ. ಕುಳಿಯ ಕುರಿತಾದ ಮಾಹಿತಿಯು ಚಂದ್ರನ ಆರಂಭಿಕ ಇತಿಹಾಸ ಮತ್ತು ಅದರ ಮೇಲ್ಮೈಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಮರುರೂಪಿಸಬಹುದು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು ಮತ್ತು ಇತರ ಖನಿಜಗಳು ಇರಬಹುದು ಎಂದು ಸಂಶೋಧಕರು ಬಹಳ ಹಿಂದಿನಿಂದಲೂ ನಂಬಿದ್ದರು. ಪ್ರಗ್ನಾನ್ ರೋವರ್ ಕಳುಹಿಸಿದ ಹೊಸ ಡೇಟಾ ಆ ಭರವಸೆಗೆ ಕೆಲವು ವಿಶ್ವಾಸಾರ್ಹತೆಯನ್ನು ನೀಡುತ್ತಿದೆ.
27 ಕೆ.ಜಿ ತೂಕದ ಪ್ರಗ್ನಾನ್ ರೋವರ್ ವಿಕ್ರಂ ಲ್ಯಾಂಡರ್‌ನಿಂದ ಕೆಳಗಿಳಿದು ರಿಮೋಟ್ ಕಂಟ್ರೋಲ್ ಕಾರಿನಂತೆ ತೆವಳುತ್ತಾ ಸಾಗಿತು. ರೋವರ್ ಚಂದ್ರನ ಮೇಲ್ಮೈಯಲ್ಲಿ ಸೆಕೆಂಡಿಗೆ ಒಂದು ಸೆಂಟಿಮೀಟರ್ ವೇಗದಲ್ಲಿ ಚಲಿಸುತ್ತದೆ. ಹಾಗೆ ಚಲಿಸುವಾಗ ಅಲ್ಲಿರುವ ವಸ್ತುಗಳನ್ನು ಪರಿಶೀಲಿಸುತ್ತಾ ದತ್ತಾಂಶ ಸಂಗ್ರಹಿಸುತ್ತದೆ.
ಚಂದ್ರಯಾನ-3 ಅನ್ನು 14 ಜುಲೈ 2023ರಂದು ಉಡಾವಣೆ ಮಾಡಲಾಯಿತು. ಇದರ ನಂತರ, ಆಗಸ್ಟ್ 23 ರಂದು ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ಈ ಮೂಲಕ ಭಾರತ ವಿಶ್ವದ 4 ಗಣ್ಯ ರಾಷ್ಟ್ರಗಳ ಪಟ್ಟಿ ಸೇರಿತು. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಸಾಧನೆ ಮಾಡಿದ್ದವು.
ಇದನ್ನೂ ಓದಿ: 2,104 ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ-4 ಯೋಜನೆಗೆ ಕೇಂದ್ರ ಒಪ್ಪಿಗೆ - Chandrayaan 4 Mission