ಮಂಗಳೂರು: ಮಳಲಿ ಮಸೀದಿಯ ಒಂದು ಹಿಡಿ ಮರಳನ್ನು ಸಹ ಬಿಟ್ಟು ಕೊಡುವುದಿಲ್ಲ. ದೇಶದಲ್ಲಿ ಸಂವಿಧಾನ ಉಳಿಸಲು, ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಸ್‌ಡಿಪಿಐ ಬದ್ಧವಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಗುಡುಗಿದರು.
ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಘ ಪರಿವಾರದವರಿಗೆ ತಾಕತ್ತಿದ್ದರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷಗಳಷ್ಟು ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್ ಇಟ್ಟು ಒಡೆದು ಹಾಕಿ, ದೇವಿಯ ವಿಗ್ರಹ ನಾಶ ಮಾಡಿರುವ ಬಗ್ಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ ಎಂದು ಸವಾಲೆಸೆದರು.
ಆರ್‌ಎಸ್‌ಎಸ್‌ನ ಆಟಕ್ಕೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬೆದರಬಹುದು. ಆದರೆ, ನಿಮ್ಮ ಆಟಕ್ಕೆ ನಾವು ಹೆದರುವುದಿಲ್ಲ. ವ್ಯಾಪಾರ ಬಹಿಷ್ಕಾರ ಮಾಡಿ ಎಂದು ಕರೆ ನೀಡುವ ಸಂಘ ಪರಿವಾರದವರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೂಸಫ್ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಿಮಗೆ ನಾಚಿಕೆಯಾಗಿಲ್ಲವಾ? ಎಂದು ಪ್ರಶ್ನಿಸಿದರು.
ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಜನರ ಪರವಾಗಿಲ್ಲ. ಉದ್ಯಮಿಗಳಾದ ಅಂಬಾನಿ, ಅದಾನಿ ಅವರ ಪರವಾಗಿದೆ. ದೇಶವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಮಾಡುವ ಬದಲು ಛಿದ್ರಗೊಳಿಸಲು ಹೊರಟಿದೆ ಎಂದು ಅಬ್ದುಲ್ ಮಜೀದ್ ಆರೋಪಿಸಿದರು.
ಇದನ್ನೂ ಓದಿ: ಮಳಲಿ ಮಸೀದಿ ವಿವಾದ - ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಮಠ ನಮ್ದೇ ಆಗಿರುವ ಸಾಧ್ಯತೆ; ಜಂಗಮ ಮಠ ಪ್ರತಿಪಾದನೆ