ಮಂಗಳೂರು : ಕಾವೇರಿ ಎಂಪೋರಿಯಂ ಕಾರ್ಪೊರೇಷನ್ನಲ್ಲಿ ಈ ಹಿಂದೆ ನಡೆದ ಭ್ರಷ್ಟಾಚಾರದ ಬಗ್ಗೆ ಸಿಐಡಿ ಮತ್ತು ಸಿಬಿಐ ತನಿಖೆ ನಡೆಯುತ್ತಿದೆ ಎಂದು ಕಾವೇರಿ ಎಂಪೋರಿಯಂ ಕಾರ್ಪೊರೇಷನ್ ಮ್ಯಾನೇಜಿಂಗ್ ಡೈರೆಕ್ಟರ್ ರೂಪಾ ಮೌದ್ಗಿಲ್ ಹೇಳಿದರು.
ಮಂಗಳೂರಿನ ಕಾವೇರಿ ಎಂಪೋರಿಯಂ ಕಾರ್ಪೊರೇಷನ್ನ ಮಳಿಗೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಎರಡ್ಮೂರು ವರ್ಷಗಳ ಹಿಂದೆ ಕೋಟ್ಯಂತರ ರೂ. ಮೌಲ್ಯದ ಭ್ರಷ್ಟಾಚಾರ ನಡೆದಿತ್ತು.
ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಐಡಿ ಚಾರ್ಜ್‌ಶೀಟ್ ಆಗಿದೆ. ಮತ್ತೊಂದು ಕೇಸ್ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಬ್ಯಾಂಕ್ ಸಿಬ್ಬಂದಿ ಪಾತ್ರವಿರುವುದರಿಂದ ಸಿಬಿಐ ತನಿಖೆಯೂ ನಡೆಯುತ್ತಿದೆ ಎಂದರು.
ಇತ್ತೀಚೆಗೆ ದುಬೈನ ಎಕ್ಸ್‌ಪೋದಲ್ಲಿ ಕಾವೇರಿ ಎಂಪೋರಿಯಂ ಕಾರ್ಪೊರೇಷನ್ನಿಂದ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿದೆ. ನಮ್ಮ ಕರಕುಶಲ ವಸ್ತುಗಳ ಪ್ರದರ್ಶನವನ್ನು ದುಬೈನಲ್ಲಿ ಮಾಡುವ ಬಗ್ಗೆ ಗಮನ ಹರಿಸಿದ್ದೇವೆ ಎಂದರು.
ಬಿದಿರು ಕಲಾಕೃತಿಗಳ ಉತ್ತೇಜನಕ್ಕೆ ನಿರ್ಧಾರ : ಮಂಗಳೂರಿನಲ್ಲಿ ಕಾವೇರಿ ಎಂಪೋರಿಯಂ ಮಳಿಗೆ ಇದ್ದರೂ ಜನಪ್ರಿಯವಾಗಿಲ್ಲ. ಅತ್ಯುತ್ತಮ ಗುಣಮಟ್ಟದ ಕರಕುಶಲ ವಸ್ತುಗಳಿದ್ದರೂ ರಾಜ್ಯದ 12 ಮಳಿಗೆಗಳಲ್ಲಿ ಕಾವೇರಿ ಎಂಪೋರಿಯಂ ಮಾರಾಟದಲ್ಲಿ ಕೊನೆಯ ಸ್ಥಾನದಲ್ಲಿದೆ.
ಇಲ್ಲಿಯ ಜನರ ಆಕರ್ಷಣೆಗಾಗಿ ಬಿದಿರಿನಿಂದ ತಯಾರಿಸಿದ ಕರಕುಶಲ ವಸ್ತುಗಳ ತಯಾರಿಗೆ ಉತ್ತೇಜನ ನೀಡಲು ಅವರಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗುತ್ತಿದೆ. ಕಾರ್ಕಳದಲ್ಲಿ ಕ್ರಾಫ್ಟ್ ಕಾಂಪ್ಲೆಕ್ಸ್ ಮಾಡಲು ಚಿಂತನೆಯಿದೆ ಎಂದರು.
ಹಿಂದಿನದಕ್ಕಿಂತ ಮೂರು ಪಟ್ಟು ಅಧಿಕ ಆದಾಯ ಬರುತ್ತಿದೆ. ಮಾರಾಟಕ್ಕೆ ಉತ್ತೇಜನ ನೀಡಲು 50 ಸಾವಿರಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿದ ಸಿಬ್ಬಂದಿಗೆ ವೇತನದ ಜೊತೆಗೆ ಶೇ.1ರಷ್ಟು ಕಮಿಷನ್ ನೀಡಲಾಗುತ್ತಿದೆ. ಇದರಿಂದಾಗಿ ವ್ಯಾಪಾರ ಹೆಚ್ಚಳವಾಗಿದೆ ಎಂದರು.
ಇದನ್ನೂ ಓದಿ: ಕೊರೊನಾ ಸೋಂಕಿನ ಭೀತಿ ನಡುವೆಯೂ ಹುಲಿಗಿಗೆ ಹರಿದು ಬಂದ ಭಕ್ತ ಸಾಗರ..
ಸರ್ಕಾರದಿಂದ ನಡೆಯುವ ಕಾರ್ಯಕ್ರಮಗಳಿಗೆ ಗಿಫ್ಟ್ ನೀಡುವಾಗ ಕಾವೇರಿ ಎಂಪೋರಿಯಂನಿಂದಲೇ ಖರೀದಿಸುವಂತೆ ವಿನಂತಿಸುತ್ತಿದ್ದೇವೆ. ಈ ಬಗ್ಗೆ ಸರ್ಕಾರದಿಂದ ಸುತ್ತೋಲೆ ಹೊರಡಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಇದ್ದರು.