ಕೊಡಗು: ನೈರುತ್ಯ ಮುಂಗಾರು ಮಳೆಯು ಕೇರಳಕ್ಕೆ ಪ್ರವೇಶಿಸಿದ್ದು, ವಾಯುಭಾರ ಕುಸಿತದಿಂದ ಕೊಡಗು ಜಿಲ್ಲೆಯಾದ್ಯಂತ ಸೋಮವಾರ (ಜೂನ್ 10) ಮುಂಜಾನೆಯಿಂದಲೇ ತುಂತುರು ಮಳೆಯ ಸಿಂಚನವಾಗುತ್ತಿದೆ. ಈ ಮೂಲಕ ಕಾಯ್ದು ಕಾವಲಿಯಂತಿದ್ದ ಇಳೆಗೆ ಮಳೆ ತಂಪೆರೆದಿದೆ.
ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ವರ್ಷದ ಮೊದಲ ಮುಂಗಾರು ಆರಂಭಕ್ಕೆ ಮುನ್ಸೂಚನೆ ಸಿಕ್ಕಿದ್ದು, ಮಳೆ ಆರಂಭ ಸ್ಥಳೀಯರಿಗೆ ಆತಂಕ ಮೂಡಿಸಿದೆ. ಕಳೆದ ವರ್ಷದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ಜನರ ಬದುಕು ಮೂರಾಬಟ್ಟೆಯಾಗಿತ್ತು. ಭೂ ಕುಸಿತದಿಂದ ಅಪಾರ ಪ್ರಮಾಣದ ಆಸ್ತಿ-ಪ್ರಾಣ ಹಾನಿ ಸಂಭವಿಸಿತ್ತು. ಮತ್ತೆ ಅದೇ ಘಟನೆ ಮರುಕಳಿಸಬಹುದು ಎಂದು ಜನರು ಭಾರೀ ಆತಂಕದಲ್ಲಿ ಇದ್ದಾರೆ.
ಕಳೆದ ವರ್ಷ ಜೂನ್ ಮೊದಲ ವಾರದಲ್ಲಿಯೇ ಜಿಲ್ಲೆಗೆ ಮುಂಗಾರು ಕಾಲಿಟ್ಟಿತ್ತು. ಆದರೆ, ಈ ಬಾರಿ ಸ್ವಲ್ಪ ತಡವಾಗಿ ಶುರುವಾಗಿದೆ.