ಮಂಗಳೂರು: ಜನರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ದೇಶದ ಏಳಿಗೆ ಬಿಜೆಪಿ ಪಕ್ಷದಿಂದಲೇ ಆಗುತ್ತದೆ ಎಂಬ ಭರವಸೆ ಸಮಾಜದಲ್ಲಿದೆ. ಹಾಗಾಗಿ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಜನತೆ ಬೆಂಬಲ ನೀಡಲಿದ್ದಾರೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ್ ಮಂಗಳೂರಿನಲ್ಲಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಾಯಕತ್ವದಲ್ಲಿ ಈ ಉಪಚುನಾವಣೆ ಎದುರಿಸಿ ಸಿಎಂ ಬೊಮ್ಮಾಯಿಯವರ ಕೈ ಬಲಪಡಿಸಲಿದ್ದೇವೆ ಎಂದರು.
ಕುಂದಾಪುರ ಹಾಗೂ ಕಾರಾವರದಲ್ಲಿ ಯೋಗೀಶ್ ಶೆಟ್ಟಿಯವರ ಮನೆಯಲ್ಲಿ ನಡೆದ ಐಟಿ ದಾಳಿಯಲ್ಲಿ ಸರ್ಕಾರದ ಕೈವಾಡ ಇದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಆದಾಯ ತೆರಿಗೆ ಇಲಾಖೆಯವರಿಗೆ ಯಾವ ಪಕ್ಷದವರು, ಯಾರು ಎಂಬುದು ಇಲ್ಲ. ಯಾರು ತೆರಿಗೆ ವಿಧಿಸದೇ ಹಣ ಗಳಿಸುತ್ತಾರೋ ಅವರ ಮೇಲೆ ದಾಳಿ ನಡೆಸುತ್ತಾರೆ. ಇದು ಕ್ಷಣ ಮಾತ್ರದಲ್ಲಿ ಆಗುವ ನಿರ್ಧಾರವಲ್ಲ. ವ್ಯವಸ್ಥಿತವಾಗಿ ಆಗುವಂತಹದ್ದು. ಸಾಕಷ್ಟು ತನಿಖೆ ನಡೆಸಿಯೇ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ಹೇಳಿದರು.
ಬಿಟ್ ಕಾಯಿನ್ ದಂಧೆಯಲ್ಲಿ ಸರ್ಕಾರದ ಕೆಲ ನಾಯಕರ ಪಾತ್ರವಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಯಾವುದೇ ಹಂತದ ತನಿಖೆಗೆ ಸಿದ್ಧರಿದ್ದು, ಈಗಾಗಲೇ ತನಿಖಾ ತಂಡಗಳಿಗೆ ಈ ಸಂಬಂಧ ಮಾಹಿತಿ ನೀಡಲಾಗಿದೆ. ಇಷ್ಟು ಸ್ಪಷ್ಟತೆ ಇದ್ದಾಗ ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡದೆ ಪಾರದರ್ಶಕವಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಪ್ರತಿಪಕ್ಷದವರು ನಮ್ಮ ಬಗ್ಗೆ ಏನಾದರೂ ಹೇಳಬೇಕೆಂಬ ಉದ್ದೇಶದಿಂದ ಆಪಾದನೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಉತ್ಸವ ರದ್ದು: ಮಾದಪ್ಪನ ದರ್ಶನಕ್ಕೆ ಅವಕಾಶ
ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಏನೇನು ಆಗಬೇಕೋ ಆ ಬಗ್ಗೆ ಶೀಘ್ರ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.