ಮಂಗಳೂರು: ಮಹಾನಗರ ಪಾಲಿಕೆಯಿಂದ ಇಂದು 317.18 ಕೋಟಿ ರೂ. ವೆಚ್ಚದ ಮಿಗತೆ ಬಜೆಟ್ ಮಂಡನೆಯಾಗಿದ್ದು, ಈ ಮೂಲಕ ಯಾವುದೇ ಹೊಸ ಯೋಜನೆಗಳು ಘೋಷಣೆಯಾಗಿಲ್ಲ.
ಮನಪಾ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲು ಸ್ಥಾಯಿ ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಜೆಟ್ನಲ್ಲಿ ಪರಿಸರ ಮತ್ತು ನೀರಿನ ಸಂರಕ್ಷಣೆ, ಸ್ವಚ್ಛತೆ ಹಾಗೂ ಶುಚಿತ್ವ, ಕಲ್ಯಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ, ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿರುವ ಬಜೆಟ್ ಎಂದು ಕಿರಣ್ ಕುಮಾರ್ ಹೇಳಿದರು.
ಆರೋಗ್ಯ ವಿಚಾರ ಕಡೆಗಣಿಸಲಾಗಿದೆ:
ಬಜೆಟ್ ಬಗ್ಗೆ ಮನಪಾ ಸದಸ್ಯ ಅನಿಲ್ ಡಿಸೋಜ ಪ್ರತಿಕ್ರಿಯಿಸಿ, ಪ್ರಸ್ತುತ ಮಂಗಳೂರು ಮನಪಾ ಮಂಡಿಸಿರುವ ಬಜೆಟ್ನಲ್ಲಿ ಆರೋಗ್ಯ ವಿಚಾರವನ್ನು ಕಡೆಗಣಿಸಲಾಗಿದೆ. ನೋ ಪಾರ್ಕಿಂಗ್, ಸೈನ್ ಬೋರ್ಡ್ಗಳು, ಝೀಬ್ರಾ ಕ್ರಾಸಿಂಗ್ ಬಣ್ಣ ಬಳಿಯಲು ಬಜೆಟ್ ನಲ್ಲಿ ಹೆಚ್ಚು ಅನುದಾನ ಇಡಬೇಕಾಗಿತ್ತು. ಕಡತ ವಿಲೇವಾರಿ ಶೀಘ್ರದಲ್ಲಿ ಮುಗಿಸಲು ಆನ್ಲೈನ್ ಪದ್ಧತಿ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿದರು.
ಓದಿ-ದೆಹಲಿ ಪ್ರತಿಭಟನೆ ವೇಳೆ ಖಡ್ಗಧಾರಿಯ ದಾಳಿ ಫೋಟೋ ವೈರಲ್: ಪೊಲೀಸ್ ಪಾರಾಗಿದ್ದು ಹೇಗೆ?
ಅಭಿವೃದ್ಧಿ ಕೆಲಸಗಳಿಗಾಗಿ ಹಣ ಕ್ರೋಢೀಕರಣ ಮಾಡಬೇಕು
ಮನಪಾ ಸದಸ್ಯ ಎ. ಸಿ. ವಿನಯ್ ರಾಜ್ ಮಾತನಾಡಿ, ಮಂಗಳೂರು ಮನಪಾದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಹಣವನ್ನು ಕ್ರೋಢೀಕರಣ ಮಾಡಬೇಕಿದೆ. ಆದರೆ ಅದರಲ್ಲಿ 46 ಶೇ. ಅನುದಾನದ ರೂಪದಲ್ಲಿ ತೋರಿಸಲಾಗಿದ್ದು, ಉಳಿದಿರೋದರಲ್ಲಿ ಆಸ್ತಿ ತೆರಿಗೆ ಹಾಗೂ ಘನತ್ಯಾಜ್ಯ ವಿಲೇವಾರಿಗೆ ಸಿಂಹ ಪಾಲು ಹೋಗಿದೆ. ಕೋವಿಡ್ ಸಂದರ್ಭವಾಗಿರುವುದರಿಂದ ಕಳೆದ ಬಜೆಟ್ನಲ್ಲಿ ನಮ್ಮ ನಿರೀಕ್ಷೆಗಳನ್ನು ಕಳೆದ ಬಜೆಟ್ನಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಜನರು ಈಗಷ್ಟೇ ಚೇತರಿಕೆ ಕಾಣುತ್ತಿದ್ದಾರೆ. ಆದ್ದರಿಂದ ಪ್ರತಿಯೊಂದಕ್ಕೂ ಮಂಗಳೂರು ಮನಪಾದ ನಾಗರಿಕರ ಕಿಸೆಗೆ ಕತ್ತರಿ ಹಾಕುವ ಬದಲು ಬೇರೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಅದರ ಬಗ್ಗೆ ಬಜೆಟ್ನಲ್ಲಿ ಯಾವ ಘೋಷಣೆಯೂ ಮಾಡಲಾಗಲಿಲ್ಲ. ಆದ್ದರಿಂದ ಈ ಬಜೆಟ್ ನಾಗರಿಕರಿಗೆ ಹೊರೆಯಾಗಿರುವ ಬಜೆಟ್ ಎಂದು ಹೇಳಿದರು.
ಡಿಸಿಬಿ ಸಮರ್ಪಕವಾಗಿಲ್ಲ
ಮಾಜಿ ಮನಪಾ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ಮನಪಾದಲ್ಲಿ ಡಿಸಿಬಿ(ಡಿಮಾಂಡ್, ಕಲೆಕ್ಷನ್, ಬ್ಯಾಲೆನ್ಸ್) ಸಮರ್ಪಕವಾಗಿಲ್ಲ. ಇದು ಬಜೆಟ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಂದಿನ ದಿನಗಳಲ್ಲಿಯಾದರೂ ಇದನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಬೇಕು. ತೆರಿಗೆಯ ಹೆಚ್ಚಿನ ಹೊರೆಯಾಗುವ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಇದು ಬೇಸರದ ಸಂಗತಿ ಎಂದರು.