ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏಪ್ರಿಲ್ 10 ರಿಂದ 20ರ ತನಕ ಬಹಳ ಅದ್ಧೂರಿ ಹಾಗೂ ವಿಜೃಂಭಣೆಯಿಂದ ನಡೆಯುತ್ತಿದೆ. ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಗೊಂದಲದ ಬಳಿಕ ದೇವಸ್ಥಾನಗಳಲ್ಲಿ ಅನ್ಯ ಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎನ್ನುವ ಹಿಂದೂ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಈ ಬಾರಿ ಪುತ್ತೂರು ಜಾತ್ರೆಗೆ ಅನ್ಯಮತೀಯ ವ್ಯಾಪಾರಿಗಳಿಗೆ ವ್ಯವಹಾರ ಮಾಡಲು ಸಂಪೂರ್ಣ ನಿಷೇಧ ಹೇರಲಾಗಿದೆ.
ಈಗಾಗಲೇ ದೇವರ ಗದ್ದೆಯಲ್ಲಿ 300ಕ್ಕೂ ಹೆಚ್ಚು ಅಂಗಡಿಗಳು ತಲೆ ಎತ್ತಿವೆ. ಉಳ್ಳಾಲ್ತಿ ದೈವ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಭೇಟಿಯ ದಿನ 50 ಲಕ್ಷಕ್ಕೂ ಅಧಿಕ ಮಲ್ಲಿಗೆ ವ್ಯಾಪಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿಂದು ಜಾಗರಣಾ ವೇದಿಕೆಯವರೇ ಈ ಬಾರಿ ಅಂಗಡಿ ಹಾಕಿರುವುದು ವಿಶೇಷ. ಹಿಂದುಗಳ ಹಬ್ಬಕ್ಕೆ ಹಿಂದುಗಳ ಅಂಗಡಿಯಿಂದಲೇ ಖರೀದಿಸಬೇಕು ಎಂದು ಸಂಘಟನೆಗಳು ಮನವಿ ಮಾಡಿಕೊಂಡಿವೆ.
ಹಿಂದೂ ಜಾಗರಣಾ ವೇದಿಕೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ ಪ್ರಯುಕ್ತ ನಡೆಯುವ ಉಳ್ಳಾಲ್ತಿ ದೈವದ ಭೇಟಿಯ ದಿನ ಮಲ್ಲಿಗೆಯ ವ್ಯಾಪಾರವನ್ನು ಆರಂಭಿಸಿದೆ. ಕಳೆದ ಏಳು ವರ್ಷಗಳಿಂದ ಈ ಮಲ್ಲಿಗೆ ವ್ಯಾಪಾರವನ್ನು ಮಾಡಲು ಆರಂಭಿಸಲಾಗಿದ್ದು, ಈ ಬಾರಿ ಮಾತ್ರ ಶೇಕಡಾ ನೂರಕ್ಕೆ ನೂರು ಹಿಂದೂಗಳ ಮೂಲಕವೇ ಮಲ್ಲಿಗೆ ವ್ಯಾಪಾರವನ್ನು ಮಾಡಿಸಲಾಗುತ್ತಿದೆ ಎನ್ನುತ್ತಾರೆ ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ಪಂಜಿಗ.
ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ: 2 ತಿಂಗಳ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ