ಮಂಗಳೂರು: ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ರಾಜ್ಯದ ಸುಮಾರು 26 ಜಿಲ್ಲೆಗಳ 101 ಕೆರೆಗಳ ಹೂಳೆತ್ತಿ ಜಲಭರಿತವನ್ನಾಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಕರ್ನಾಟಕ ಸರ್ಕಾರ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಲು ಒಪ್ಪಿದ್ದು, ಸುಮಾರು 11.24 ಕೋಟಿ ರೂ. ಬಿಡುಗಡೆ ಮಾಡಿದೆ. ಒಟ್ಟಾರೆ ಈ ಯೋಜನೆಯ ಮೊತ್ತ 28 ಕೋಟಿ ರೂ. ಆಗಿದ್ದು, ಅದರಲ್ಲಿ ಸುಮಾರು ಅರ್ಧದಷ್ಟು ಹಣವನ್ನು ಸರ್ಕಾರ ನೀಡುತ್ತಿದೆ ಎಂದು ಅವರು ಹೇಳಿದರು.
ಇಲ್ಲಿ ನಾವು ಯಾವ ಕೆರೆಯನ್ನು ಅಭಿವೃದ್ಧಿ ಮಾಡಲು ಯೋಜನೆ ಹಾಕಿದ್ದೇವೆಯೋ ಅದಕ್ಕೆ ಆ ಕೆರೆಯ ಫಲಾನುಭವಿಗಳ ಸಮಿತಿಯೊಂದನ್ನು ರಚನೆ ಮಾಡುತ್ತೇವೆ. ಕೆರೆಯ ಹೂಳೆತ್ತಿದ ಮೇಲೆ ಮಳೆಗಾಳದ ಸಂದರ್ಭ ಮತ್ತೆ ಹೂಳು ಸೇರದಂತೆ, ಜನರು ದುರುಪಯೋಗ ಪಡಿಸದಂತೆ ಆ ಸಮಿತಿ ನೋಡಿಕೊಳ್ಳುತ್ತದೆ. ಅಲ್ಲದೆ ಮುಂದೆ ಕೆರೆಯ ರಕ್ಷಣೆಯ ಜವಾಬ್ದಾರಿಯೂ ಈ ಸಮಿತಿಯದ್ದಾಗುತ್ತದೆ. ಈಗಾಗಲೇ ಸುಮಾರು 25 ಸಾವಿರ ಕುಟುಂಬಗಳು ಈ ಕೆರೆಯ ಸದುಪಯೋಗವನ್ನು ಪಡೆದುಕೊಂಡಿವೆ. ಮಳೆಯ ನೀರಿನಿಂದ ತುಂಬಿಕೊಂಡ ಈ ಕೆರೆಗಳು ಕೃಷಿಗೆ, ಹೈನುಗಾರಿಕೆಗೆ, ಮನೆ ಬಳಕೆಗೆ ಉಪಯೋಗ ಆಗುತ್ತದೆ. ನಾವು ಈಗಾಗಲೇ ನೂರು ಕೆರೆಗಳ ಹೂಳೆತ್ತಿದ್ದು, ಅಲ್ಲೆಲ್ಲಾ ಅಂತರ್ಜಲದಲ್ಲಿ, ಬಾವಿಗಳಲ್ಲಿ, ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ ಎಂದರು.
ಸಾವಿರಾರು ಲೋಡ್ ಹೂಳುನ್ನು ರೈತರು ಉಚಿತವಾಗಿ ಸಾಗಿಸುತ್ತಿದ್ದಾರೆ. ಇಲ್ಲದಿದ್ದರೆ 28 ಕೋಟಿ ರೂ.ನಲ್ಲಿ ನೂರು ಕೆರೆಗಳ ಹೂಳೆತ್ತುವ ಕೆಲಸ ಮಾಡಲು ಸಾಧ್ಯವಿಲ್ಲ. ಇದೊಂದು ಅತ್ಯುತ್ತಮ ಕಾರ್ಯವಾಗಿದ್ದು, ವಿಶೇಷವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಪುಟ್ಟರಾಜು ಅವರ ವಿಶೇಷ ಆಸಕ್ತಿ ವಹಿಸಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ತಕ್ಷಣ ಈ ವರ್ಷದ ಹೂಳೆತ್ತುವ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ ಎಂದು ಹೇಳಿದರು.