ಬಂಟ್ವಾಳ: ಹಿಂದು ಯುವಕನೊಬ್ಬ ತನ್ನ ಮದುವೆಯ ಹಿನ್ನೆಲೆಯಲ್ಲಿ ಮಸೀದಿಯಲ್ಲೇ ಇಫ್ತಾರ್ ನೀಡಿದ್ದಾನೆ. ಈ ಮೂಲಕ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕು ಹಿಂದು-ಮುಸ್ಲಿಂ ಸೌಹಾರ್ದತೆಗೆ ಮತ್ತೊಮ್ಮೆ ಸಾಕ್ಷಿಯಾಯಿತು. ವಿಟ್ಲ ಸಮೀಪದ ಬೈರಿಕಟ್ಟೆ ಎಂಬ ಪುಟ್ಟ ಊರು ವಿಶೇಷ ಕಾರ್ಯದ ಮುಖೇನ ಗಮನ ಸೆಳೆದಿದೆ.
ಗೆಳೆಯರ ಬಳಗ ಬೈರಿಕಟ್ಟೆಯ ಸದಸ್ಯರಾದ ಚಂದ್ರಶೇಖರ ಜೆಡ್ಡು ಅವರ ವಿವಾಹ ಸಮಾರಂಭ ಏಪ್ರಿಲ್ 24 ರಂದು ನಡೆದಿತ್ತು. ಆದರೆ ಮುಸ್ಲಿಮರಿಗೆ ರಂಝಾನ್ ತಿಂಗಳಾದ ಕಾರಣ ಮದುವೆಗೆ ಬರಲಾಗಿರಲಿಲ್ಲ. ಇದಕ್ಕಾಗಿ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಸೋಮವಾರ ಸಂಜೆ ಏರ್ಪಡಿಸಲಾಗಿತ್ತು.
![Iftar in the mosque of a Hindu youth's marriage](https://etvbharatimages.akamaized.net/etvbharat/prod-images/15120796_thu.jpeg)
ಮಸೀದಿಯಿಂದ ಸನ್ಮಾನ: ಇಫ್ತಾರ್ ಕೂಟ ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮ್ಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳು ಸನ್ಮಾನಿಸಿದರು. ಸೌಹಾರ್ಧ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ನವ ದಂಪತಿಯ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಭೆ: ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ