ಮಂಗಳೂರು : ಲಸಿಕೆಯನ್ನು ಪಾಕಿಸ್ತಾನಕ್ಕೆ ನೀಡುವ ಮುಂಚೆ ಪರೀಕ್ಷೆ ಬರೆಯಲು ಸಿದ್ಧರಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ನೀಡಿ ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10ನೇ ತರಗತಿ, ದ್ವಿತೀಯ ಪಿಯುಸಿ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.
ಪರೀಕ್ಷೆ ಸಮಯದಲ್ಲಿ ಕೊರೊನಾ ಕಾಣಿಸಿಕೊಂಡರೆ ಅವರ ಶೈಕ್ಷಣಿಕ ವರ್ಷವೇ ವ್ಯರ್ಥವಾಗಲಿದೆ. ಆದ ಕಾರಣ ಅವರಿಗೆ ಮೊದಲು ಕೊರೊನಾ ಲಸಿಕೆ ನೀಡಬೇಕು. ತದ ನಂತರ ಬೇರೆ ದೇಶಗಳಿಗೆ ನೀಡಲಿ ಎಂದರು.
ಮೀಸಲಾತಿ ಕೂಗಿನಿಂದ ದ.ಕ ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ದೊಡ್ಡ ಮಟ್ಟದ ಅನ್ಯಾಯವಾಗುತ್ತಿದೆ. ಈಗ ಎಲ್ಲೆಡೆ ಮೀಸಲಾತಿ ಕೂಗು ಕೇಳಿ ಬರುತ್ತಿದೆ. 2ಎ ಇದ್ದವರು ಎಸ್ಸಿ, ಎಸ್ಟಿ ಮಾಡಿ ಎಂದು, 3ಎ ಇದ್ದವರು 2ಎ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಸುಳ್ಳು ಭರವಸೆಯಿಂದ ಆಗಿದೆ.
ಮೀಸಲಾತಿ ವಿಚಾರದಲ್ಲಿ ಅದನ್ನು ಮಾಡುವುದು ಸಂವಿಧಾನ, ಸರ್ಕಾರಕ್ಕೆ ಬಿಟ್ಟ ವಿಚಾರ. ಆದ್ರೆ, ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಬಾರದು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ 2ಎ ವರ್ಗದಲ್ಲಿರುವ ಪೂಜಾರಿ, ತಿಯಾ, ಗಾಣಿಗ, ಕುಲಾಲ, ಗಟ್ಟಿ, ಆಚಾರ್ಯ ಮೊದಲಾದ ಸಣ್ಣ ಸಮುದಾಯದವರು ಅನ್ಯಾಯಕ್ಕೊಳಗಾಗಿದ್ದಾರೆ. ಇದರ ಬಗ್ಗೆ ಜಿಲ್ಲೆಯ 7 ಬಿಜೆಪಿ ಶಾಸಕರು ಮೌನವಾಗಿದ್ದಾರೆ. ಇವರಿಗೆ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.