ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಟ್ಟಡ ಕಾರ್ಮಿಕನನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.
ಉತ್ತರ ಪ್ರದೇಶ ರಾಜ್ಯದ ಗೋರಖ್ಪುರ ಜಿಲ್ಲೆಯ ಬಂದಾರು ಗ್ರಾಮದ ಶಶಿಶೇಖರ್ ಯಾದವ್(20), ಮಂಗಾರು ಯಾದವ್(26), ರಿತೇಶ್ ಯಾದವ್(21), ಜಿತೇಂದರ್ ಯಾದವ್(19) ಶಿಕ್ಷೆಗೊಳಗಾದವರು.
ಪ್ರಕರಣದ ವಿವರ...
ಈ ನಾಲ್ವರು ನಗರದ ಸುರತ್ಕಲ್ನಲ್ಲಿರುವ ಎನ್ಐಟಿಕೆ ಕ್ಯಾಂಪಸ್ನಲ್ಲಿ ಕಟ್ಟಡ ಕೆಲಸಕ್ಕೆ ಬಂದಿದ್ದರು. ಈ ಕಟ್ಟಡ ಕಾಮಗಾರಿಯನ್ನು ಸುಖದೇವ್ ಕಂಪನಿ ವಹಿಸಿಕೊಂಡಿದ್ದು, ಇವರು ಬೇರೆ ಬೇರೆ ರಾಜ್ಯಗಳಿಂದ ಕಟ್ಟಡ ಕಾಮಗಾರಿಗೆ ಕಾರ್ಮಿಕರನ್ನು ಕರೆಸಿದ್ದರು. ಅವರಿಗೆ ಉಳಿದುಕೊಳ್ಳಲು ಸುರತ್ಕಲ್ ಸಮೀಪ ಶೆಡ್ಗಳನ್ನು ನಿರ್ಮಿಸಿದ್ದರು.
2018 ಮಾರ್ಚ್ 11ರಂದು ಸಂಜೆ 6.45ರ ಸುಮಾರಿಗೆ ಶಶಿಶೇಖರ್ ಯಾದವ್ ಶೆಡ್ನಲ್ಲಿನ ತನ್ನ ಕೋಣೆಯ ಮುಂಭಾಗ ನಿಂತು "ನನ್ನ ಮೊಬೈಲ್ ಫೋನನ್ನು ಒಡೆದವರು ಯಾರು?..." ಎಂದು ಕಿರುಚಾಡುತ್ತಿದ್ದ. ಈ ಸಂದರ್ಭದಲ್ಲಿ ಉಳಿದ ಮೂವರೂ ಆರೋಪಿಗಳು ಸೇರಿ ಆತನೊಂದಿಗೆ ಮೊಬೈಲ್ ಫೋನ್ ಒಡೆದಿರುವ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆ ಸಂದರ್ಭ ಅದೇ ಕಂಪನಿಯಲ್ಲಿ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದ ಶೆಡ್ ವಾಸಿ ಬಿಹಾರ ಮೂಲದ ಅಜಯ್ ಕುಮಾರ್ ಚೌಧರಿ(26) ಅಲ್ಲಿಗೆ ಬಂದು, ಯಾಕೆ ಸುಮ್ಮನೆ ಈ ರೀತಿಯಲ್ಲಿ ಬಯ್ಯುತ್ತೀರಿ ಎಂದು ಪ್ರಶ್ನಿಸಿದ್ದ. ಆಗ ನಾಲ್ವರು ಆರೋಪಿಗಳು ಸೇರಿ ಈ ಶೆಡ್ನಲ್ಲಿ ಯಾವ ವಿಷಯಕ್ಕೂ ಮೂಗು ತೂರಿಸಿ ಮಾತನಾಡುತ್ತೀಯಾ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೆ ಶಶಿಶೇಖರ್ ಯಾದವ್ ಅಲ್ಲೇ ಇದ್ದ ಮರದ ಕೋಲಿನಿಂದ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಹಿಗ್ಗಾಮುಗ್ಗಾ ಹೊಡೆದಿದ್ದ. ಅಲ್ಲದೆ ಇತರ ಮೂವರೂ ಈ ಸಂದರ್ಭ ಅಜಯ್ ಕುಮಾರ್ ಚೌಧರಿ ಮೇಲೆ ಕೈಗಳಿಂದ ದಾಳಿ ನಡೆಸಿದ್ದರು. ಇದರಿಂದ ಆತ ಅಲ್ಲೇ ಸ್ಮೃತಿ ತಪ್ಪಿ ಬೀಳುತ್ತಾನೆ.
ಈ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಪುಳಕಿತ್ ಯಾದವ್ ಹಾಗೂ ಇತರರು ಸೇರಿ ಆತನನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಪುಳಕಿತ್ ಯಾದವ್ ರಾತ್ರಿ 9.30ರ ಸುಮಾರಿಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಜಯ್ ಕುಮಾರ್ ಚೌಧರಿ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 4.15ರ ಸುಮಾರಿಗೆ ಸಾವನ್ನಪ್ಪಿದ್ದ.
ಈ ಬಗ್ಗೆ ಪೊಲೀಸ್ ಅಧಿಕಾರಿ ಶ್ರೀಧರ ಶಾಸ್ತ್ರಿ ಪ್ರಕರಣ ದಾಖಲಿಸಿಕೊಂಡಿದ್ರು. ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸ್ ಅಧಿಕಾರಿ ರಾಮಕೃಷ್ಣ ಕೆ.ಜೆ, ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ 6ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 21 ಮಂದಿ ಸಾಕ್ಷಿಗಳನ್ನು ವಿಚಾರಣೆ ನಡೆಸಿ, 36 ದಾಖಲೆಗಳನ್ನು ಪರಿಗಣಿಸಿ ಆರೋಪಿಗಳನ್ನು ದೋಷಿ ಎಂದು ಘೋಷಿಸಿದೆ. ಕೊಲೆ ಮಾಡಿರೋದಕ್ಕೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಸೈದುನ್ನೀಸಾ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದಾರೆ.