ಬಂಟ್ವಾಳ(ದ.ಕ.): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅರೀಪೆಕಟ್ಟೆ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗೌಸ್ ಜಲಾಲುದ್ದೀನ್ ಬೆಂಕಿ ಹಚ್ಚಿದ ಆರೋಪಿ. ಫಾತಿಮತ್ ಬುಶ್ರಾ ಗಾಯಗೊಂಡವರು.
ಮಹಮ್ಮದ್ ಕಬೀರ್ ಅವರ ಸಹೋದರಿ ಫಾತಿಮತ್ ಬುಶ್ರಾ ಅವರನ್ನು ವಿಟ್ಲ ನಿವಾಸಿ ಗೌಸ್ ಜಲಾಲುದ್ದೀನ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಈ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ತವರು ಮನೆಗೆ ತೆರಳಿದ್ದಳು. 10 ದಿನಗಳ ಹಿಂದೆ ಗೌಸ್ ಜಲಾಲುದ್ದೀನ್ ಕಬೀರ್ ಮನೆಗೆ ಬಂದು ತನ್ನ ಪತ್ನಿಯನ್ನು ಕಳುಹಿಸಿಕೊಡುವ ವಿಚಾರದಲ್ಲಿ ಕೋಪಗೊಂಡಿದ್ದ. ಶನಿವಾರ ಮಧ್ಯಾಹ್ನ ಏಕಾಏಕಿ ಮನೆಗೆ ಬಂದು, ಬಾಟ್ಲಿಯಲ್ಲಿ ಇಂಧನವನ್ನು ತಂದ ಗೌಸ್ ಜಲಾಲುದ್ದೀನ್ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಗೆ ಬೆಂಕಿ ಹಚ್ಚುವ ಉದ್ದೇಶದಿಂದ ಮನೆಯಲ್ಲಿದ್ದ ಸೋಫಾಗೆ ಇಂಧನ ಸುರಿದು ಬೆಂಕಿ ಇಟ್ಟಿದ್ದಾನೆ ಎಂದು ದೂರಲಾಗಿದೆ.
ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆಯು ಹಬ್ಬಿ ಅಲ್ಲಿದ್ದ ಸೋಫಾ ಸೆಟ್, ಧರ್ಮಗ್ರಂಥ, ಹೊದಿಕೆಗಳು, ಅಕ್ಕಿ, ತೆಂಗಿನಕಾಯಿ ಹೊತ್ತಿ ಉರಿದು ಸುಮಾರು ₹10 ಸಾವಿರ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಕಬೀರ್ ಇದನ್ನು ಆಕ್ಷೇಪಿಸಲು ಬಂದಾಗ ಕೈಯಿಂದ ಹೊಡೆದು ದೂಡಿದ ಪರಿಣಾಮ ಗಾಯಗೊಂಡಿದ್ದಾರೆ. ಸದ್ಯ ಕಬೀರ್ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಹಮ್ಮದ್ ಕಬೀರ್ ದೂರು ನೀಡಿದ್ದು, ಆರೋಪಿ ಗೌಸ್ ಜಲಾಲುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಪ್ರಕರಣ: ಮತ್ತೆ ಮೂವರು ಆರೋಪಿಗಳ ಬಂಧನ