ಕಡಬ(ದಕ್ಷಿಣ ಕನ್ನಡ) : ಕಡಬದಲ್ಲಿ ನಡೆದ ಭಜನಾ ಮಹೋತ್ಸವಕ್ಕೆ ನಿಯೋಜನೆಗೊಂಡಿದ್ದ ಉಪ್ಪಿನಂಗಡಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಮದ್ಯದ ಅಮಲಿನಲ್ಲಿ ಪಾನ್ ಅಂಗಡಿ ಮಾಲೀಕನಿಗೆ ಲಾಠಿಯಲ್ಲಿ ಯದ್ವಾತದ್ವಾ ಹೊಡೆದು ಅಂಗಡಿ ಧ್ವಂಸ ಮಾಡಿ ಕರ್ತವ್ಯದ ನಡುವೆಯೇ ಘಟನಾ ಸ್ಥಳದಿಂದ ಪರಾರಿಯಾದ ಆರೋಪ ಕೇಳಿಬಂದಿದೆ. ಕಡಬದಲ್ಲಿ ನಡೆಯುತ್ತಿದ್ದ ಭಜನಾ ಮಹೋತ್ಸವಕ್ಕೆ ಹೆಚ್ಚುವರಿಯಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿದ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
ಈ ವೇಳೆ ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಯತ್ತ ಬಂದ ಪೊಲೀಸ್ ಸಿಬ್ಬಂದಿಗಳಾದ ಶಿಶಿಲದ ಮೋಹನ್ ಹಾಗೂ ಎಎಸ್ಐ ಕೋಡಿಂಬಾಳದ ಸೀತಾರಾಮ ಎಂಬವರು ಪಾನ್ ಬೀಡ ಪಡೆದು ಹಣ ನೀಡದೆ ಹೋಗಲು ಮುಂದಾಗಿದ್ದರು. ಆದರೆ ಪಾನ್ ಅಂಗಡಿಯಾತ ಹಣ ನೀಡುವಂತೆ ವಿನಂತಿಸಿದ್ದ. ಇದರಿಂದ ಕೋಪಗೊಂಡ ಪೊಲೀಸ್ ಸಿಬ್ಬಂದಿ ಪೊಲೀಸರಲ್ಲಿಯೇ ದುಡ್ಡು ಕೇಳ್ತೀಯಾ ಎಂದು ಲಾಠಿಯಿಂದ ಹಲ್ಲೆಗೈದು ಪಾನ್ ಸ್ಟಾಲನ್ನು ಧ್ವಂಸ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.
ಪೊಲೀಸ್ ಸಿಬ್ಬಂದಿ ದುರ್ವರ್ತನೆ ತೋರಿ ಬಳಿಕ ತಮ್ಮ ಕಾರಿನಲ್ಲಿ ಹೋಗಿ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಸುತ್ತುವರಿದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೋಹನ್ ಎಂಬಾತ ಸ್ಥಳದಿಂದ ಎಸ್ಕೇಪ್ ಆಗಿದ್ದು, ಎಎಸ್ಐ ಸೀತಾರಾಮ ಎಂಬವರ ಕಾರಿನ ಸುತ್ತ ಜನ ಜಮಾಯಿಸಿದ್ದರು. ಅಲ್ಲದೆ ಸ್ಥಳದಲ್ಲಿದ್ದ ಜನರು ಅಮಾಯಕನ ಮೇಲೆ ಲಾಠಿಏಟು ನೀಡಿದ್ದನ್ನು ಪ್ರಶ್ನಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಏಟಿಗೆ ಅಸ್ಪಸ್ಥಗೊಂಡ ವ್ಯಕ್ತಿಯನ್ನು ಕೂಡಲೇ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕಡಬ ಎಸ್.ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಆಸ್ಪತ್ರೆಯತ್ತ ಧಾವಿಸಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮುಖಂಡರೊಂದಿಗೆ ಮಾತುಕತೆ ನಡೆಸಿದ ಪೊಲೀಸರು, ರಾಜಿಯಲ್ಲಿ ಪ್ರಕರಣ ಮುಗಿಸುವ ತೀರ್ಮಾನಕ್ಕೆ ಬಂದಿದ್ದು, ಬೀಡ ಸ್ಟಾಲ್ ನಾಶ ಪಡಿಸಿದ್ದಕ್ಕೆ ಸುಮಾರು 5 ಸಾವಿರ ರೂಪಾಯಿ ಹಣದ ಜೊತೆಗೆ ಕ್ಷಮೆಯಾಚಿಸುವ ಬಗ್ಗೆ ಹೇಳಿರುವುದಾಗಿ ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಪ್ರತಿಕ್ರಿಯಿದ್ದು, ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಓದಿ : ವ್ಯಾಪಾರ ನಿರ್ಬಂಧದ ಬಳಿಕ ಪುತ್ತೂರಿನ ಜಾತ್ರೆಯಲ್ಲಿ ಹಿಂದೂಗಳ ಆಟೋ ಬಳಸುವಂತೆ ಅಭಿಯಾನ