ಉಳ್ಳಾಲ (ದಕ್ಷಿಣ ಕನ್ನಡ): ಉಳ್ಳಾಲದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿನ್ನೆ ಕೊರೊನಾ ದೃಢಪಟ್ಟಿದ್ದ ಸೋಂಕಿತೆಯ ಮನೆಯಲ್ಲಿದ್ದ 16 ಮಂದಿಗೆ ಇಂದು ಸೋಂಕು ದೃಢಪಟ್ಟಿದೆ. ಈ ಮೂಲಕ ಇಂದು ಒಂದೇ ದಿನ ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಮಂದಿಗೆ ಕೊರೊನಾ ದೃಢಪಟ್ಟಿದೆ.
ನಿನ್ನೆ ಉಳ್ಳಾಲದ ಆಜಾದ್ ನಗರದ 57 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸೋಂಕಿತೆಯ ಮನೆಯಲ್ಲಿದ್ದ 16 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮನೆಯ ಇಬ್ಬರು ಸದಸ್ಯರು ಸೌದಿಯಿಂದ ಆಗಮಿಸಿದ್ದು, ಇವರ ಸಂಪೂರ್ಣ ಮಾಹಿತಿ ತಿಳಿದು ಬಂದಿಲ್ಲ.
ಉಳ್ಳಾಲ ಠಾಣೆಯ ಇಬ್ಬರು ಪೊಲೀಸರಿಗೆ ಈ ಹಿಂದೆ ಸೋಂಕು ತಗುಲಿತ್ತು. ಇವರ ಸಂಪರ್ಕದಲ್ಲಿದ್ದ ಇಬ್ಬರು ಸಿಬ್ಬಂದಿಗೆ ಇಂದು ಸೋಂಕು ದೃಢಪಟ್ಟಿದೆ. ವಿದೇಶದಿಂದ ಆಗಮಿಸಿ ಉಳ್ಳಾಲದ ಖಾಸಗಿ ರೆಸಾರ್ಟ್‍ನಲ್ಲಿ ಕ್ವಾರಂಟೈನ್ ಆಗಿದ್ದ ಕೃಷ್ಣಾಪುರ ಮೂಲದ ಇಬ್ಬರಿಗೆ ಸೋಂಕು ತಗುಲಿದೆ. ದೇರಳಕಟ್ಟೆಯ ಖಾಸಗಿ ಆಹಾರ ತಯಾರಿಕಾ ಸಂಸ್ಥೆಯ ಇಬ್ಬರಿಗೆ ಸೋಂಕು ತಗುಲಿದೆ.
ಶಾಸಕ ಯು.ಟಿ.ಖಾದರ್ ಸೀಲ್ ಡೌನ್ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದು, ಜನರು ಸೋಂಕಿನಿಂದ ರಕ್ಷಣೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.