ಮಂಗಳೂರು (ದಕ್ಷಿಣ ಕನ್ನಡ): ಇನ್ನು ಮುಂದೆ ಅರ್ಜಿ ಗುಜರಾಯಿಸಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಯೂ ನಿಂತು ಜನನ ಪ್ರಮಾಣ ಪತ್ರವನ್ನು ಪಡೆಯುವ ತೊಂದರೆ ಇರುವುದಿಲ್ಲ. ಜನನ ಪ್ರಮಾಣ ಪತ್ರವು ಪೋಸ್ಟ್ ಮೂಲಕ ಮನೆ ಬಾಗಿಲಿಗೆ ಬರಲಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಸೇವೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಮೂಲಕ ಮುಂದಿನ ದಿನಗಳಲ್ಲಿ ಜನನ ಪ್ರಮಾಣ ಪತ್ರವು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭವಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 400-600 ಶಿಶುಗಳ ಜನನವಾಗುತ್ತದೆ. ರಾಜ್ಯದ 9 ಜಿಲ್ಲೆಗಳ, ಕೇರಳ ರಾಜ್ಯದ ಮೂರು ಜಿಲ್ಲೆಗಳ ಗರ್ಭಿಣಿಯರು ಈ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗುತ್ತಾರೆ. ಸದ್ಯ ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳ ಜನನ ಪ್ರಮಾಣ ಪತ್ರಗಳನ್ನು ಆಸ್ಪತ್ರೆಯಲ್ಲಿಯೇ ನೀಡಲಾಗುತ್ತದೆ. ಇದನ್ನು ಪಡೆಯಲು ಅರ್ಜಿದಾರರು 2 ಬಾರಿ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಆದರೆ ಪ್ರಸ್ತುತ ಭಾರತೀಯ ಅಂಚೆ ಇಲಾಖೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಿಂದ ಜನಸಾಮಾನ್ಯರು ಇಂತಹ ತೊಡಕಿನಿಂದ ಮುಕ್ತರಾಗಲಿದ್ದಾರೆ.
ಇದನ್ನೂ ಓದಿ: ಮತ್ತೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ರಮೇಶ್ ಜಾರಕಿಹೊಳಿ?
ಈ ಸೇವೆಯಡಿ ಜನನ ಪ್ರಮಾಣಪತ್ರ ಪಡೆಯಲು ಅರ್ಜಿದಾರರಿಗೆ ಎರಡು ಆಯ್ಕೆಗಳಿವೆ. ಒಂದು ಖುದ್ದಾಗಿ ಅವರೇ ಲೇಡಿಗೋಷನ್ ಆಸ್ಪತ್ರೆಗೆ ಬಂದು ಜನನ ಪ್ರಮಾಣಪತ್ರ ಪಡೆದುಕೊಳ್ಳುವುದು. ಮತ್ತೊಂದು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಲ್ಲೇ ಜನನ ಪ್ರಮಾಣಪತ್ರ ಪಡೆದುಕೊಳ್ಳುವುದು. ಅರ್ಜಿ ಸಲ್ಲಿಸುವ ವಿಧಾನ ಸರಳ ವಿಧಾನದಲ್ಲಿದ್ದು, 100 ರೂ. ಅನ್ನು ಪೋಸ್ಟ್ ಮ್ಯಾನ್ಗೆ ಸಲ್ಲಿಸಿ ಜನನ ಪ್ರಮಾಣಪತ್ರ ಪಡೆಯಲು ಸಮ್ಮತಿಯಿದೆ ಎಂದು ಸಹಿ ಹಾಕಬೇಕು. ಪ್ರಮಾಣಪತ್ರ ಮುದ್ರಣಗೊಂಡ ತಕ್ಷಣ ಸ್ಪೀಡ್ ಪೋಸ್ಟ್ನಲ್ಲಿ ಮನೆಗೆ ಬರಲಿದೆ.