ಮಂಗಳೂರು: ಶ್ರೀರಾಮಸೇನೆ ಆಜಾನ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಹೋರಾಟ ಮಾಡುತ್ತಿದೆ ಎಂದು ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಜಾನ್ಗೆ ಬಳಸುವ ಧ್ವನಿವರ್ಧಕ ತೆಗೆಯಲು ನಾವು ಮೇ 9 ತಾರೀಕಿನವರೆಗೆ ಗಡುವನ್ನು ನೀಡಿದ್ದೆವು. ಆಜಾನ್ ಧ್ವನಿವರ್ಧಕ ಸ್ಥಗಿತಗೊಳಿಸಲು ಎಲ್ಲ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ನೀಡಿದ್ದೇವೆ. ಆದರೆ, ಯಾವುದೇ ಫಲ ದೊರಕದ ಹಿನ್ನೆಲೆಯಲ್ಲಿ ನಾವು ಅಂದು ಪ್ರತಿಭಟನಾರ್ಥವಾಗಿ ಆಜಾನ್ನಷ್ಟೇ ದೊಡ್ಡ ಶಬ್ದದಲ್ಲಿ ಸುಪ್ರಭಾತ, ಓಂಕಾರ ನಾದವನ್ನು ಹಾಕಿದ್ದೆವು ಎಂದು ಹೇಳಿದರು.
ಎಲ್ಲರಿಗೂ ನಿಯಮ ಒಂದೇ: ಯಕ್ಷಗಾನದಲ್ಲಿ ಮೈಕ್ ಬಳಸುವ ವಿಚಾರವು ಯಕ್ಷಗಾನ ವೀಕ್ಷಕರು, ಸಂಘಟಕರಿಗೆ ಸಂಬಂಧಪಟ್ಟದ್ದಾಗಿದೆ. ಯಕ್ಷಗಾನ ನಡೆಯುವ ಸಂದರ್ಭ ವೀಕ್ಷಕರಿಗೆ ಮಾತ್ರ ಮೈಕ್ನ ಅವಶ್ಯಕತೆ ಇರುತ್ತದೆ. ಅಲ್ಲದೇ, ಯಕ್ಷಗಾನ ಆಯೋಜಕರಿಗೆ ಮೈಕ್ ಅನುಮತಿ ಪಡೆಯಲು 15 ದಿನಗಳ ಕಾಲಾವಕಾಶ ಇರುತ್ತದೆ. ಸುಪ್ರೀಂಕೋರ್ಟ್ ಆದೇಶ ಎಲ್ಲರಿಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲನೆ ಮಾಡಬೇಕಾಗಿದೆ ಎಂದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮಸೂದ್ ಅವರು ರಾಮಸೇನೆಯಲ್ಲ, ರಾವಣ ಸೇನೆಯೆಂಬ ಹೇಳಿಕೆ ಖಂಡನೀಯ. ಪ್ರಮೋದ್ ಮುತಾಲಿಕ್ರನ್ನು ಉಕ್ರೇನ್ಗೆ ಹೋಗಲಿ ಎಂದು ಹೇಳಿದ್ದಾರೆ. ಉಕ್ರೇನ್ಗೆ ಮುತಾಲಿಕ್ ಅವರಲ್ಲ, ಮಸೂದ್ ಅವರೇ ಹೋಗಲಿ. ನಾವು ರಾಮನನ್ನಷ್ಟೇ ಅಲ್ಲ ರಾವಣನನ್ನೂ ಪೂಜಿಸುತ್ತೇವೆ ಎಂದು ತಿವಿದರು.
ರಾವಣನಿಗಾಗಿಯೇ ದೇಶದ 5 ಕಡೆಗಳಲ್ಲಿ ದೇವಾಲಯಗಳಿದ್ದು, ಮಸೂದ್ ಅವರು ರಾವಣನ ಬಗ್ಗೆ ತಿಳಿಯದೇ ತಪ್ಪು ಮಾತನಾಡಿದ್ದಾರೆ. ನಮಗೆ ರಾವಣನ ಮೇಲೆಯೂ ನಂಬಿಕೆಯಿದ್ದು, ಇವರ ಮಾತಿನಿಂದ ನಾವು ಕುಗ್ಗೋದಿಲ್ಲ. ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಮಸೂದ್ ಅವರು ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಓದಿ: ಆಧುನಿಕತೆಗೆ ಹೊಂದಿಕೊಳ್ಳುತ್ತಿದ್ದಾರಾ ಸಾಧು- ಸಂತರು?: ಈ ಫೋಟೋಗಳು ಹೇಳ್ತಿವೆ ಹೊಸ ಕಥೆ!